

ಅಕ್ಕಿಆಲೂರ: ಒಂದು ವಾರದಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಇದರ ಬೆನ್ನಲ್ಲೇ ಜಿಲ್ಲೆಯ ಪ್ರಸಿದ್ಧ ಅಕ್ಕಿಆಲೂರ ಮಾರುಕಟ್ಟೆಯಲ್ಲಿ ಜಾನುವಾರುಗಳ ವ್ಯಾಪಾರ ಜೋರಾಗಿದೆ.
ಈ ಬಾರಿ ಮುಂಗಾರು ಪೂರ್ವ ಮಳೆ ಚೆನ್ನಾಗಿ ಆಗಿದೆ. ಹೊಲಗಳಲ್ಲಿ ಉಳುಮೆ ಮಾಡಲು ಎತ್ತುಗಳ ಖರೀದಿಗೆ ಮುಂದಾಗುತ್ತಿರುವ ರೈತರು, ಅಕ್ಕಿಆಲೂರ ಪೇಟೆಗೆ ಲಗ್ಗೆ ಇಡುತ್ತಿದ್ದಾರೆ. ಪ್ರತಿ ಮಂಗಳವಾರ ಇಲ್ಲಿನ ಚನ್ನವೀರೇಶ್ವರ ಮಾರುಕಟ್ಟೆಗೆ ಸಾವಿರಾರು ಸಂಖ್ಯೆಯಲ್ಲಿ ಎತ್ತುಗಳು, ಹೋರಿಗಳು ಬಂದಿರುತ್ತವೆ. ಜಿಲ್ಲೆಯ ಇತರ ಭಾಗ ಹಾಗೂ ಸುತ್ತಲಿನ ಶಿವಮೊಗ್ಗ, ಉತ್ತರ ಕನ್ನಡ, ಬಳ್ಳಾರಿ, ಧಾರವಾಡ, ಗದಗ, ಬೆಳಗಾವಿ ಜಿಲ್ಲೆಗಳಿಂದಲೂ ರೈತರು ಎತ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಬರುತ್ತಾರೆ.
ಹಲವು ರೈತರು ಎತ್ತುಗಳನ್ನು ಮಾರಾಟ ಮಾಡಿ, ಹೊಸ ಎತ್ತು ಕೊಂಡುಕೊಂಡರೆ, ಮತ್ತೆ ಕೆಲ ರೈತರು, ಹೊಸ ಜೋಡೆತ್ತುಗಳ ಖರೀದಿ ಮಾಡುತ್ತಾರೆ. ಬೇಸಾಯಕ್ಕೆ ಯೋಗ್ಯವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಎತ್ತುಗಳನ್ನು ಹೂಡಿ ಪ್ರಾಯೋಗಿಕ ಪರೀಕ್ಷೆ ಮಾಡುತ್ತಾರೆ. ಆಗ ಇಷ್ಟವಾದರೆ ಮಾತ್ರ ಖರೀದಿ ನಡೆಯುತ್ತದೆ.
ಬಯಲು ಸೀಮೆ, ಮಲೆನಾಡು, ಅರೆಮಲೆನಾಡುವ ಪ್ರದೇಶದ ಕೃಷಿ ಚಟುವಟಿಕೆಗಳಿಗೆ ಯೋಗ್ಯವಾಗಿರುವ ಎಲ್ಲ ತಳಿಯ ಜಾನುವಾರುಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳಿದ್ದರೂ, ಭೂಮಿತಾಯಿಗೆ ಪೂಜೆ ಮಾಡಿ ಜೋಡೆತ್ತುಗಳಿಂದಲೇ ಉಳುಮೆ ಮಾಡುವುದೆ ಶ್ರೇಷ್ಠ ಎಂಬ ನಂಬಿಕೆಯಿಂದ ನಾವು ಎತ್ತುಗಳನ್ನು ಖರೀದಿಸುತ್ತಿದ್ದೇವೆ ಎಂದು ರೈತರು ಹೇಳುತ್ತಾರೆ.
ದರ ಗಗನಮುಖಿ: ವಿವಿಧ ತಳಿಯ ಎತ್ತು, ಹೋರಿಗಳಿಗೆ ಬೇಡಿಕೆ ಹೆಚ್ಚಿದೆ. ಮಳೆ ಬೀಳುವ ಮುಂಚೆ 50 ಸಾವಿರ ರೂ.ನಿಂದ 1.50 ಲಕ್ಷ ರೂ.ಗೆ ಜೋಡೆತ್ತು ಸಿಗುತ್ತಿದ್ದವು. ಮಳೆ ಸುರಿಯಲು ಆರಂಭವಾಗುತ್ತಿದ್ದಂತೆ ಎತ್ತುಗಳ ದರ ಗಗನಕ್ಕೇರಿದೆ. ಹಲ್ಲು ಹೆಚ್ಚಾದಂತೆ ಹೆಚ್ಚಿನ ದರದಲ್ಲಿ ಎತ್ತುಗಳು ಮಾರಾಟವಾದವು. ಅಧಿಕ ಹಲ್ಲುಗಳ ಜಾನುವಾರುಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ವ್ಯಕ್ತವಾಯಿತು. 50 ಸಾವಿರ ರೂ.ಗೆ ದೊರೆಯುತ್ತಿದ್ದ ಕಿಲಾರಿ ತಳಿಯ ಜೋಡೆತ್ತುಗಳು ಈಗ 1.50 ಲಕ್ಷ ರೂ.ವರೆಗೂ ಮಾರಾಟವಾಗುತ್ತಿವೆ. 70 ಸಾವಿರ ರೂ. ಇದ್ದ ಹಳ್ಳಿಕಾರ ತಳಿ 1.70 ರಿಂದ 2 ಲಕ್ಷ ರೂ., 50 ಸಾವಿರ ರೂ. ಇದ್ದ ಜವಾರಿ ತಳಿ, 2.50 ಲಕ್ಷ ರೂ., 90 ಸಾವಿರ ರೂ. ಇದ್ದ ದೇವಣಿ 2 ಲಕ್ಷ ರೂ., ಕೃಷ್ಣವೇಣಿ, ಬರಗೂರ ತಳಿಯ ಎತ್ತುಗಳು 1ರಿಂದ 3 ಲಕ್ಷ ರೂ. ವರೆಗೂ ಮಾರಾಟಗುತ್ತಿವೆ.
ಮಳೆ ಬಂದರೆ ಸಾಕು, ಅಕ್ಕಿಆಲೂರ ದನದ ಮಾರುಕಟ್ಟೆಯಲ್ಲಿ ದರ ಭಾರಿ ಏರಿಕೆಯಾಗುತ್ತದೆ. ಕಡೆಯ ಹಲ್ಲುಗಳ ಜೋಡೆತ್ತು ಖರೀದಿಸಿದ್ದೇನೆ. ಅಕ್ಕಿಆಲೂರ ಜಾನುವಾರು ಮಾರುಕಟ್ಟೆಯಲ್ಲಿ ಎಲ್ಲ ತಳಿಯ ಎತ್ತುಗಳು ದೊರೆಯುತ್ತವೆ. | ಕೃಷ್ಣ ಸವಣೂರ, ಅಕ್ಕಿಆಲೂರ ರೈತ ಅಕ್ಕಿಆಲೂರ ಜಾನುವಾರು ಮಾರುಕಟ್ಟೆಗೆ ರಾಜ್ಯದ ಹಲವಾರು ಜಿಲ್ಲೆಗಳಿಂದ ಸಾವಿರಾರು ರೈತರು ಬರುವುದರಿಂದ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಮಳೆ ಬಿದ್ದಿದ್ದರಿಂದ ಈ ವಾರ ಬಹಳಷ್ಟು ಜೋಡಿ ಎತ್ತುಗಳು ಮಾರಾಟವಾಗಿವೆ. ಒಂದು ಜೋಡತ್ತು ಮಾರಾಟವಾದರೆ ರೈತರಿಂದ ಶುಲ್ಕವಾಗಿ ಕೇವಲ 5 ರೂ. ಪಡೆಯುತ್ತೇವೆ. ಬಹುತೇಕ ಉದ್ರಿ ವ್ಯವಹಾರಗಳೇ ನಡೆಯುತ್ತವೆ. | ಅರವಿಂದ ಸುಗಂಧಿ, ಎಪಿಎಂಸಿ ಕಾರ್ಯದರ್ಶಿ, ಹಾನಗಲ್ಲ