

ಆರ್ಡಿ: ಆರ್ಡಿ ಪರಿಸರದಲ್ಲಿ ಗುರುವಾರ ಮಧ್ಯಾಹ್ನ ಬೀಸಿದ ಭಾರಿ ಗಾಳಿ ರಭಸಕ್ಕೆ ಚಿತ್ತೇರಿ ಕ್ರಾಸ್ ಆನಂದ ಪೂಜಾರಿಯವರ ಮನೆ ಮುಂಭಾಗದ ಸಿಮೆಂಟ್ ಶೀಟ್, ದನದ ಕೊಟ್ಟಿಗೆ ಹೆಂಚು ಹಾರಿ ಹೋಗಿವೆ. ಕುಡಿಯುವ ನೀರಿನ ಪ್ಲಾಸ್ಟಿಕ್ ಟ್ಯಾಂಕ್ ಮೇಲೆ ಅಡಕೆ ಮರ ಬಿದ್ದು ಜಖಂಗೊಂಡಿದೆೆ. ವಿದ್ಯುತ್ ಕಂಬ ತುಂಡಾಗಿ ಸಂಪರ್ಕ ಕಡಿತಗೊಂಡಿದೆ.
ಲಕ್ಷ್ಮಣ ನಾಯ್ಕರ ದನದ ಕೊಟ್ಟಿಗೆ ತಗಡು ಶೀಟ್, ಮೇಲ್ಬೆಟ್ಟು ಜೆಡ್ಡು ಅಣ್ಣಯ್ಯ ನಾಯ್ಕ ಮನೆ ಮುಂಭಾಗದ ಸಿಮೇಂಟ್ ಶೀಟ್ ಹಾರಿ ಹೋಗಿದೆ. ಚಿತ್ತೇರಿ ಕ್ರಾಸ್ ಬಳಿ 5ಕ್ಕೂ ಮಿಕ್ಕಿ ವಿದ್ಯುತ್ ಕಂಬ ಹಾನಿಗೊಂಡಿವೆ. ಆರ್ಡಿ ಮೇಲ್ಮನೆ ನಾಗೇಶ್ ಶೆಟ್ಟಿಯವರ ತೋಟದಲ್ಲಿ ನೂರಾರೂ ಅಡಕೆ ಮರ ತುಂಡಾಗಿವೆ. ಆರ್ಡಿ ಕೆಳಮನೆ ಜಯರಾಮ ಶೆಟ್ಟಿಯವರ ಮನೆ ಹೆಂಚು, ಸಿಮೆಂಟ್ ಶೀಟ್ ಹಾನಿಗೊಂಡಿದ್ದು, ಕಾರಿನ ಮೇಲೆ ಮರ ಬಿದ್ದು ಜಖಂಗೊಂಡಿದೆ. ಆರ್ಡಿ ಜಗನಾಥ ಶೆಟ್ಟಿಯವರ ತೋಟದಲ್ಲಿ ಅಡಕೆ ಮರಗಳು ನೆಲಕ್ಕುರುಳಿದ್ದು, ಸಣ್ಣಮ್ಮ ಶೆಡ್ತಿಯವರ ದನದ ಕೊಟ್ಟಿಗೆ ಹಾನಿಯಾಗಿದೆ. ಆರ್ಡಿ ಸುತ್ತಮುತ್ತಲಿನ ಭಾಗಗಳಲ್ಲಿ ಹಲವಾರು ಮನೆ, ದನದ ಕೊಟ್ಟಿಗೆ ಅಡಕೆ ತೋಟಕ್ಕೆ ಹಾನಿಯಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಸುಮಾರು 50ಕ್ಕೂ ಮಿಕ್ಕಿ ವಿದ್ಯುತ್ ಕಂಬ ತುಂಡಾಗಿ ಬಿದ್ದಿವೆ.