ಭಾರಿ ಮಳೆಗೆ ಅಪಾರ ಪ್ರಮಾಣದ ಬೆಳೆ ನಷ್ಟ

IMG-20240813-WA0275
Published on

ಆಲೂರು: ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಆಲೂರು ತಾಲೂಕಿನ ಕೆ.ಹೊಸಕೋಟೆ ಹೋಬಳಿ ಬೆಂಬಳೂರು, ಶಿರಗಾವರ ಸೇರಿದಂತೆ ಹಲವು ಗ್ರಾಮಗಳಲ್ಲಿ ಸುಮಾರು 50 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಭತ್ತ, ಕಾಫಿ, ಮೆಣಸು, ಏಲಕ್ಕಿ ಬೆಳೆಗಳು ಸಂಪೂರ್ಣವಾಗಿ ಜಲಾವೃತಗೊಂಡು ರೈತರು ಕಂಗಾಲಾಗಿದ್ದಾರೆ.


ಸಾವಿರಾರು ರೂ. ಖರ್ಚು ಮಾಡಿ ಗದ್ದೆ ನಾಟಿ ಮಾಡಲಾಗಿದೆ. ಕೆಲವರು ನಾಟಿ ಮಾಡುವ ಸಸಿಮಡಿ ಅಗೆ ಉಯ್ಯಲಾಗಿದೆ. ಆದರೆ ಮಂಗಳವಾರ ಸುರಿದ ಮಳೆಗೆ ಸಂಪೂರ್ಣವಾಗಿ ಕೊಚ್ಚಿ ಹೋಗಿವೆ. ಇದರಿಂದ ನಮ್ಮ ಬದುಕನ್ನೇ ಕಿತ್ತುಕೊಂಡಿದೆ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ.


ರೈತ ಸಂಘದ ಹಿರಿಯ ಮುಖಂಡ ಹೈದೂರು ಜಯಣ್ಣ ಮಾತನಾಡಿ, ಕಳೆದೊಂದು ತಿಂಗಳಿಂದ ಸುರಿದ ಮಹಾ ಮಳೆಗೆ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಇದರ ಜತೆಗೆ ಮಂಗಳವಾರ ಸುರಿದ ಭಾರಿ ಮಳೆಗೆ ನಾಟಿ ಮಾಡಿದ್ದ ಭತ್ತದ ಬೆಳೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮತ್ತೊಂದು ಕಡೆ ಅತಿವೃಷ್ಟಿ ಇವರೆಡರ ಮಧ್ಯೆ ಸಿಲುಕಿ ರೈತರು ನರಕಯಾತನೆ ಅನುಭವಿಸುತ್ತಿದ್ದಾರೆ. ತಕ್ಷಣ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ರೈತರಿಗೆ ಹೆಚ್ಚು ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.

ಕೆ.ಹೊಸಕೋಟೆ ಹೋಬಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ನಾಟಿ ಮಾಡಿದ್ದ ಬೆಳೆ ಹಾಗೂ ಹಗೆ ಹಾಕಿದ್ದ ಸಸಿ ಮಡಿಗಳು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿಹೋಗಿದೆ. ಕಾಫಿ, ಏಲಕ್ಕಿ ಉದುರಿ ಹೋಗಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಿ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪೂವಯ್ಯ ಮನವಿ ಮಾಡಿದರು.

ರೈತರು ಧೃತಿಗೆಡಬಾರದು ನಿಮ್ಮ ಜತೆ ನಾನಿದ್ದೇನೆ: ಶಾಸಕ ಸಿಮೆಂಟ್ ಮಂಜು ಮಾತನಾಡಿ, ಕಳೆದ ಒಂದೆರಡು ತಿಂಗಳಿಂದ ಬೀಳುತ್ತಿರುವ ಮಳೆಯಿಂದ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಇದರ ಜತೆಗೆ ಮಂಗಳವಾರ ಸುರಿದ ಭಾರಿ ಮಳೆ ಹೊಸಕೋಟೆ ಹೋಬಳಿ ಕೆಲವು ಗ್ರಾಮಗಳಲ್ಲಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ರೈತರು ಬೆಳೆದ ಭತ್ತದ ಬೆಳೆ ಹಾಗೂ ಭತ್ತದ ಸಸಿ ಮಡಿ ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿ ಹೋಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮತ್ತು ಫೋಟೋ ನೋಡಿದ್ದೇನೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದು ನನ್ನ ಕ್ಷೇತ್ರದ ರೈತರಿಗೆ ಹೆಚ್ಚು ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರೈತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು, ನಿಮ್ಮ ಜತೆ ನಾನಿದ್ದೇನೆ ಎಂದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net