

ದೇವದುರ್ಗ: ಹಿಂದುಳಿದ ಹೂಗಾರ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಹೂಗಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ 100 ಕೋಟಿ ರೂ. ಅನುದಾನ ನೀಡುವಂತೆ ಒತ್ತಾಯಿಸಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಸಂಘ ಸೋಮವಾರ ಮನವಿ ಸಲ್ಲಿಸಿತು.
ಹೂಗಾರು ಸಮುದಾಯ ಅತ್ಯಂತ ಹಿಂದುಳಿದಿದ್ದು, ವಿವಿಧ ಹೆಸರಿನಿಂದ ಕರೆಯಲ್ಪಡುತ್ತದೆ. ಹೂಗಾರ, ಶೂಲ್‌ಮಾಲಿ, ಪೂಚಾರ್, ಶೂಲಾರಿ, ಹೂವಾಡಿಗ ಸೇರಿ ವಿವಿಧ ಹೆಸರಿನಿಂದ ಕರೆಸಿಕೊಂಡು ಕಾಯಕವನ್ನೇ ನಂಬಿಕೊಂಡು ಜೀವನ ನಡೆಸುತ್ತಿದೆ. ಹೂಗಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದರೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. 2022ರಲ್ಲಿ ಬೆಂಗಳೂರಿನಲ್ಲಿ ಹೋರಾಟ ಮಾಡಿದಾಗ ನಿಗಮ ಸ್ಥಾಪಿಸುವ ಭರವಸೆ ನೀಡಲಾಗಿತ್ತು. ಆದರೆ, ಇಂದಿಗೂ ನಿಗಮ ಆರಂಭಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಲಾಯಿತು.
ಕರ್ನಾಟಕ ಮಾಲಿ, ಮಾಲಗಾರ್ ಹಾಗೂ ಹೂಗಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ವಿವಿಧ ಯೋಜನೆ ಜಾರಿಗೊಳಿಸಿ 100 ಕೋಟಿ ರೂ. ಅನುದಾನ ನೀಡಬೇಕು. ಇದೇ ವಿಧಾನಮಂಡಲ ಅಧಿವೇಶನದಲ್ಲಿ ಈ ಕುರಿತು ಸರ್ಕಾರ ಕ್ರಮಕೈಗೊಳ್ಳಬೇಕು. ಸಮುದಾಯದವರನ್ನು ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಲಾಯಿತು.