

ರಾಯಚೂರು: ಲಾಕ್‌ಡೌನ್‌ನಿಂದ ಸಮಸ್ಯೆ ಎದುರಿಸುತ್ತಿರುವ ಹೂಗಾರ ಸಮುದಾಯದವರಿಗೂ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಹೂಗಾರ, ಗುರವ, ಜೀರ, ಪೂಜಾರ ಸೇವಾ ಸಂಘದ ಜಿಲ್ಲಾ ಸಮಿತಿ ಸದಸ್ಯರು ಎಡಿಸಿ ದುರಗೇಶಗೆ ಗುರುವಾರ ಮನವಿ ಸಲ್ಲಿಸಿದರು.
ಹೂವು ಮಾರಾಟ, ದೇವಸ್ಥಾನದಲ್ಲಿ ಪೂಜಾರಿಕೆ ಅವಲಂಬಿಸಿರುವ ಸಮುದಾಯದ ಜನರು ಲಾಕ್‌ಡೌನ್‌ನಿಂದಾಗಿ ಜೀವನೋಪಾಯಕ್ಕೆ ಪರದಾಡುವಂತಾಗಿದೆ. ಲಿಂಗಾಯತ ಸಮುದಾಯದ ಒಂದು ಭಾಗವಾಗಿರುವ ಹೂಗಾರ ಸಮುದಾಯ ಬಹುತೇಕವಾಗಿ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಇದ್ದು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯವಾಗಿದೆ. ಕರೊನಾ ಸಂಕಷ್ಟದಲ್ಲಿ ಹೂವು ಮಾರಾಟ ಇಲ್ಲದೆ, ಇರುವ ದೇವಸ್ಥಾನಗಳೂ ಬಂದ್ ಆಗಿದ್ದರಿಂದ ಬದುಕು ನಡೆಸುವುದು ಕಠಿಣವಾಗಿದೆ.
ಇಂತಹ ಸಂದರ್ಭದಲ್ಲಿ ನಮ್ಮಂತೆ ಕುಲ ಕಸುಬು ಮಾಡುವ ಇತರ ಸಮುದಾಯ ಗಳಿಗೆ, ಹೂವು ಬೆಳೆಯುವವರಿಗೆ ಆರ್ಥಿಕ ನೆರವು ಘೋಷಿಸಲಾಗಿದೆ. ಆದರೆ, ರಸ್ತೆ ಬದಿ, ಹಳ್ಳಿ ಹಳ್ಳಿಯಲ್ಲಿ ಪುಟ್ಟಿ ಹಿಡಿದು ಹೂವು ಮಾರಾಟ ಮಾಡುತ್ತಿರುವ ಹೂಗಾರ ಸಮುದಾಯದವರನ್ನು ಮರೆತಿರುವುದು ನೋವಿನ ಸಂಗತಿ. ಈ ಹಿನ್ನೆಲೆಯಲ್ಲಿ ಹೂಗಾರ ಸಮುದಾಯಕ್ಕೂ ಆರ್ಥಿಕ ನೆರವು ಘೋಷಿಸಬೇಕೆಂದು ಆಗ್ರಹಿಸಿದರು. ನಿಯೋಗದಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷ ಬಸವರಾಜ ಹೂಗಾರ, ಖಜಾಂಚಿ ಈರಣ್ಣ ಹೂಗಾರ, ಉಪಾಧ್ಯಕ್ಷ ್ನನರಸಣ್ಣ ಹೂಗಾರ, ಮುಖಂಡ ಸದಾನಂದ ಎಂ.ಪೂಜಾರಿ ಇದ್ದರು.