ಹುಚ್ಚವ್ವನಹಳ್ಳಿಯಲ್ಲಿ ಮಂದಗತಿಯಲ್ಲಿ ಜಲಜೀವನ್ ಕಾರ್ಯ

Huchhavvanahalli, Jaljeevan Mission,
Published on

ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯಾದ, ಮನೆ ಮನೆಗೆ ನೀರು ತಲುಪಿಸುವ ಜಲಜೀವನ್ ಮಿಷನ್ ಯೋಜನೆ ಗ್ರಾಮೀಣ ಪ್ರದೇಶಗಳಲ್ಲಿ ಬಹುಭಾಗ ಮಂದಗತಿಯಲ್ಲಿ ಸಾಗುತ್ತಿದೆ.

ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುಚ್ಚವ್ವನಹಳ್ಳಿ ದಾವಣಗೆರೆ ಜಿಲ್ಲಾ ಹಾಗೂ ತಾಲೂಕಿನ ಗಡಿಯಂಚಿನ ಗ್ರಾಮವಾಗಿದೆ. ಅಂದಾಜು 850 ಮನೆಗಳನ್ನು ಹೊಂದಿರುವ ದೊಡ್ಡ ಗ್ರಾಮ.

ನಾಲ್ಕು ವರ್ಷಗಳ ಹಿಂದೆಯೇ ಹುಚ್ಚವ್ವನಹಳ್ಳಿ ಗ್ರಾಮದ ಪ್ರತಿ ಮನೆಗೂ ನಲ್ಲಿ ಅಳವಡಿಸಿ ನೀರು ಪೂರೈಸುವ ಕಾರ್ಯಕ್ಕೆ ಜಿಲ್ಲಾ ಪಂಚಾಯಿತಿ ಟೆಂಡರ್ ನೀಡಿತ್ತು. ಇದರ ಗುತ್ತಿಗೆ ಪಡೆದವರು ಸಮರ್ಪಕವಾಗಿ ಕೆಲಸ ಮಾಡಿಲ್ಲ.

ಗ್ರಾಮದ ಕೆಲವು ಭಾಗಗಳಲ್ಲಿ ಪೈಪ್ ಅಳವಡಿಸಲು ರಸ್ತೆ ಅಗೆದಿರುವುದು, ಇನ್ನೂ ಕೆಲವು ಕಡೆ ಪೈಪ್‌ಗಳನ್ನು ಹಾಕಿ ನಲ್ಲಿಗಳನ್ನು ಹಾಕದಿರುವುದು, ಅಲ್ಲಲ್ಲಿ ಪೈಪ್‌ಗಳನ್ನು ರಾಶಿ ಹಾಕಿರುವುದು ಹೀಗೆ ಕೆಲಸಗಳು ಸ್ಥಗಿತಗೊಂಡಿವೆ ಎಂಬುದು ಗ್ರಾಮಸ್ಥರ ಆರೋಪ.

ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿರುವ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಆರು ಸದಸ್ಯರಿದ್ದು, ಕೂಡಲೇ ಸಂಬಂಧಿತ ಅಧಿಕಾರಿಗಳನ್ನು ಭೇಟಿ ಮಾಡಿ ಜಲಜೀವನ್ ಮಿಷನ್ ಕಾರ್ಯಗಳಿಗೆ ಚುರುಕು ಮುಟ್ಟಿಸುವ ಜತೆ ಕುಡಿಯುವ ನೀರಿನ ಟ್ಯಾಂಕ್ ದುರಸ್ತಿಗೊಳಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ನೀರಿನ ಟ್ಯಾಂಕ್ ಸೋರಿಕೆ: ಗ್ರಾಮದಲ್ಲಿ ಎರಡು ಓವರ್‌ಹೆಡ್ ಟ್ಯಾಂಕ್‌ಗಳಿವೆ. 50 ಸಾವಿರ ಲೀಟರ್ ಸಾಮರ್ಥ್ಯದ ಹೊಸ ಟ್ಯಾಂಕ್ ಇದೆ. ಒಂದು ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ಇದೆ. ಇದು 50 ವರ್ಷಗಳ ಹಿಂದಿನದ್ದಾಗಿದ್ದು, ಶಿಥಿಲಾವಸ್ಥೆಗೆ ತಲುಪಿದೆ. ಟ್ಯಾಂಕ್ ತುಂಬಿಸಿದರೆ ಕ್ಷಣಾರ್ಧದಲ್ಲಿ ಸೋರುತ್ತದೆ. ಈ ಬಗ್ಗೆ ಪಿಡಿಒ ಹಾಗೂ ಆರ್‌ಡಿಪಿಆರ್ ಅಧಿಕಾರಿಗಳನ್ನು ವಿಚಾರಿಸಿದರೆ ಟ್ಯಾಂಕ್ ದುರಸ್ತಿ ಜಲಜೀವನ್ ಯೋಜನೆ ವ್ಯಾಪ್ತಿಗೆ ಸೇರಿದೆ. ಇದರ ಗುತ್ತಿಗೆದಾರರು ದುರಸ್ತಿ ಮಾಡಿಸಬೇಕು ಎನ್ನುತ್ತಾರೆ ಅಧಿಕಾರಿಗಳು.

ತಾಲೂಕಿನ ಕೆಲವು ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯ ಕಾರ್ಯಗಳು ಸಂಪೂರ್ಣಗೊಂಡಿಲ್ಲ. ಸಂಬಂಧಿತ ಇಂಜಿನಿಯರ್ ಮೂಲಕ ಗುತ್ತಿಗೆದಾರರಿಗೆ ಬಾಕಿ ಕಾರ್ಯಗಳನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ.
l ರಾಮಭೋವಿ, ಕಾರ್ಯನಿರ್ವಾಹಕಾಧಿಕಾರಿ, ದಾವಣಗೆರೆ ತಾಪಂ.

ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಜೆಜೆಎಂ ಕೆಲಸಗಳು ಪೂರ್ಣಗೊಂಡಿಲ್ಲ. ಸೋರುವ ನೀರಿನ ಟ್ಯಾಂಕ್ ದುರಸ್ತಿಯಾಗಿಲ್ಲ. ನಾಲ್ಕು ವರ್ಷ ಕಳೆದರೂ ಕೆಲಸ ಮುಗಿದಿಲ್ಲ. ಆದ್ದರಿಂದ ಈಗಿನ ಗುತ್ತಿಗೆದಾರರನ್ನು ಕೈಬಿಟ್ಟು ಬೇರೆಯವರಿಗೆ ಗುತ್ತಿಗೆ ನೀಡಲು ಗ್ರಾಮ ಪಂಚಾಯಿತಿಯಿಂದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗೆ ಪತ್ರ ಬರೆಯಲಾಗಿದೆ.
l ಎನ್.ಬಿ.ಮಹೇಶ್, ಸದಸ್ಯರು, ಗ್ರಾಮ ಪಂಚಾಯಿತಿ, ಹುಚ್ಚವ್ವನಹಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net