ಹಣಕಾಸು ಸಂಸ್ಥೆಗಳು ತೊಂದರೆ ಕೊಟ್ಟರೆ ಹೋರಾಟ

19 myk
Published on

ಮಾಯಕೊಂಡ: ಮೈಕ್ರೋ ಫೈನಾನ್ಸ್​ಗಳು ರೈತರಿಗೆ ಹಾಗೂ ಸಾರ್ವಜನಿಕರಿಗೆ ಅಧಿಕ ಬಡ್ಡಿ ದರದಲ್ಲಿ ನೀಡಿರುವ ಸಾಲವನ್ನು ಬಲವಂತವಾಗಿ ವಸೂಲಿಗೆ ಮುಂದಾದರೆ ಮತ್ತು ತೊಂದರೆ ಕೊಟ್ಟರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಎಚ್ಚರಿಕೆ ನೀಡಿದರು.

ಮಾಯಕೊಂಡದಲ್ಲಿ ಮಂಗಳವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಗ್ರಾಮ ಘಟಕದ ನಾಮ ಫಲಕ ಅನಾವರಣಗೊಳಿಸಿ ಮಾತನಾಡಿದರು.

ಫೈನಾನ್ಸ್ ಕಿರುಕುಳದಿಂದ ರಾಜ್ಯಾದ್ಯಂತ ಅನೇಕ ಸಾವು ನೋವುಗಳು ಸಂಭವಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೈನಾನ್ಸ್​ಗಳ ಬಲವಂತದ ಸಾಲ ವಸೂಲಿಗೆ ಕಡಿವಾಣ ಹಾಕಲು ಸುಗ್ರೀವಾಜ್ಞೆ ಹೊರಡಿಸಿದ್ದಾರೆ. ಮನೆಯ ಬಾಗಿಲಿಗೆ ನೋಟಿಸ್ ಹಚ್ಚುವ ಫೈನಾನ್ಸ್ ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಆದರೂ ಫೈನಾನ್ಸ್​ಗಳ ಕಾಟ ಇನ್ನೂ ತಪ್ಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಯಕೊಂಡದ ರೈತ ಗುಡ್ಡಪ್ಪ ಎಂಬುವರು ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಮನೆ ನಿರ್ವಣಕ್ಕೆ ದಾವಣಗೆರೆಯ ಖಾಸಗಿ ಫೈನಾನ್ಸ್​ನಲ್ಲಿ ಸುಮಾರು 18 ಲಕ್ಷ ರೂ. ಸಾಲ ಪಡೆದಿದ್ದು, ಈಗಾಗಲೇ 7 ಲಕ್ಷ ರೂ.ಗಳನ್ನು ತುಂಬಿದ್ದಾರೆ. ಕಳೆದ ಮೂರು ನಾಲ್ಕು ತಿಂಗಳಿನಿಂದ ಉಳಿದ ಕಂತುಗಳ ಹಣ ತುಂಬಲು ಕಿರುಕುಳ ನೀಡುತ್ತಿದ್ದಾರೆ. ಮನೆಯ ಬಾಗಿಲಿಗೆ ನೋಟಿಸ್ ಹಚ್ಚಿದ್ದಾರೆ. ಇಂತಹ ಕೃತ್ಯ ನಡೆದರೂ ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ ಎಂದು ಕಿಡಿಕಾರಿದರು.

ಮೈಕ್ರೋ ಫೈನಾನ್ಸ್ ಗಳ ವಿರುದ್ಧ ನೂರಾರು ಕಾರ್ಯಕರ್ತರು ಬೈಕ್ ರ‍್ಯಾಲಿ ಕೈಗೊಂಡಿದ್ದು, ದಾವಣಗೆರೆಯ ಫೈನಾನ್ಸ್ ಕಚೇರಿಗಳ ಮುಂದೆ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.

ಕಾರ್ಯಕರ್ತರಾದ ಹುಚ್ಚವ್ವನಹಳ್ಳಿ ಪ್ರಕಾಶ್, ಮುಜೀಬ್ ಸಾಬ್ ಅಬುಸಾಲೇ, ಗಂಗಾಧರಪ್ಪ, ಹೂವಿನಮಡು ನಾಗರಾಜ್, ನರಗನಹಳ್ಳಿ ಚೌಡಪ್ಪ, ಸುರೇಶ್ ನಾ್ಕ್ಕಯ ಉಮೇಶ್, ಸೋಮಶೇಖರ್, ಲಿಂಗೇಶ್, ಪಾಂಡುರಂಗಪ್ಪ, ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net