

ಜಗಳೂರು: ತಾಲೂಕಿನ ಹುಚ್ಚವ್ವನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗೆ ಭಾನುವಾರ ಚುನಾವಣೆ ನಡೆಯಿತು.
ಸಂಘದ ವ್ಯಾಪ್ತಿಯ ಹುಚ್ಚವ್ವನಹಳ್ಳಿ, ದಿಬ್ಬದಹಳ್ಳಿ, ಕಾನನಕಟ್ಟೆ, ತಾಯಿಟೋಣಿ ಮಾದೇಮುತ್ತೇನಹಳ್ಳಿ, ಹುಚ್ಚವ್ವನಹಳ್ಳಿ ಕೊರಚರಹಟ್ಟಿಯಿಂದ ಒಟ್ಟು 12 ಸ್ಥಾನಗಳಿಗೆ 24 ಮಂದಿ ನಾಮಪತ್ರ ಸಲ್ಲಿಸಿದ್ದರು.
ಭಾನುವಾರ ಬೆಳಗ್ಗೆ ಸಂಘದ ಕಚೇರಿಯಲ್ಲಿ ಶುರುವಾದ ಚುನಾವಣೆಯಲ್ಲಿ ಸಂಜೆ 4 ಗಂಟೆಯವರೆಗೂ ಶಾಂತಿಯುತ ಮತದಾನ ಹಾಗೂ ಮತ ಎಣಿಕೆ ನಡೆಯಿತು.
ಅಂತಿಮವಾಗಿ ಪ್ರಹ್ಲಾದ ಗೌಡ, ರಂಗನಾಥ್ ರೆಡ್ಡಿ , ಕಾನನಕಟ್ಟೆ ಪ್ರಭು ನೇತೃತ್ವದ ತಂಡದಲ್ಲಿ ಏಳು ಅಭ್ಯರ್ಥಿಗಳು ಜಯ ಗಳಿಸಿದರೆ, ಕುಬೇಂದ್ರಪ್ಪ, ಅರವಿಂದ್ ಪಾಟೀಲ್, ಮಹೇಶ್ ನೇತೃತ್ವದ ತಂಡದಲ್ಲಿ ಐದು ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಒಟ್ಟು 540 ಮತಗಳಲ್ಲಿ 470 ಮತ ಚಲಾವಣೆಯಾಗಿದ್ದು, 19 ತಿರಸ್ಕೃತವಾಗಿವೆ.
ಸಾಲಗಾರರ ಕ್ಷೇತ್ರದಿಂದ ಸಾಮಾನ್ಯ ಅಭ್ಯರ್ಥಿಗಳಾದ ತಾಯಿಟೋಣಿ ಅರವಿಂದ್ ಪಾಟೀಲ್, ಹುಚ್ಚವ್ವನಹಳ್ಳಿ ಆರ್.ಟಿ.ಮಹೇಶ್, ಹೊಸಕಾನನಕಟ್ಟೆ ಕೆ.ಎಸ್.ಪ್ರಭು, ಹುಚ್ಚವ್ವನಹಳ್ಳಿ ಟಿ.ಆರ್.ಹನುಮಂತರೆಡ್ಡಿ, ಕೊರಚರಹಟ್ಟಿ ನಾಗಮ್ಮ ಜಯಗಳಿಸಿದರು.
ಮಹಿಳಾ ಮೀಸಲಾತಿ ಅಭ್ಯರ್ಥಿಗಳಾದ ಕಾನನಕಟ್ಟೆ ಕಮಲಮ್ಮ, ಹುಚ್ಚವನಹಳ್ಳಿ ಶಾರದಮ್ಮ, ಹಿಂದುಳಿದ ವರ್ಗ ಎ ಅಭ್ಯರ್ಥಿ ದಿಬ್ಬದಹಳ್ಳಿ ನಜೀರ್ ಅಹಮದ್, ಬಿ.ವರ್ಗದಲ್ಲಿ ಹುಚ್ಚವ್ವನಹಳ್ಳಿ ಲತಾ ಕುಮಾರಿ, ಪರಿಶಿಷ್ಟ ಪಂಗಡ ಮೀಸಲಾತಿ ಅಭ್ಯರ್ಥಿ ಕಾನನಕಟ್ಟೆ ಬೊಮ್ಮಲಿಂಗಪ್ಪ, ಪರಿಶಿಷ್ಟ ಜಾತಿ ಅಭ್ಯರ್ಥಿ ಎಸ್.ತಿಪ್ಪೇಸ್ವಾಮಿ ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ತಾಯಿಟೋಣಿ ಸಂಜಯಕುಮಾರ್ ಸೇರಿ ಒಟ್ಟು 12 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹರೀಶಕುಮಾರ್ ತಿಳಿಸಿದರು.