ಹುಬ್ಬಳ್ಳಿ ಯುವತಿ ಹಂತಕನಿಗೆ ಕಠಿಣ ಶಿಕ್ಷೆಗೆ ಒತ್ತಾಯ

honnali
Published on

ಹೊನ್ನಾಳಿ: ಹುಬ್ಬಳಿಯ ಯುವತಿ ಅಂಜಲಿ ಹಂತಕನ ಗಲ್ಲಿಗೇರಿಸಲು ಆಗ್ರಹಿಸಿ ತಾಲೂಕು ಗಂಗಾಮತ ಸಮಾಜ, ಭಗತ್‌ಸಿಂಗ್ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾದ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಾಗಿ ತಾಲೂಕು ಕಚೇರಿಗೆ ತಲುಪಿತು. ಬಳಿಕ ಗ್ರೇಡ್ 2 ತಹಸೀಲ್ದಾರ್ ಸುರೇಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಗಂಗಾಮತ ಸಮಾಜದ ತಾಲೂಕು ಅಧ್ಯಕ್ಷ ಎಚ್.ಕೆ. ವೆಂಕಟೇಶ್ ಮಾತನಾಡಿ, ಹಂತಕನನ್ನು ಜಾಮೀನು ಮೇಲೆ ಬಿಡುಗಡೆ ಮಾಡಿದರೆ ಮತ್ತೊಬ್ಬರು ಇಂತಹ ತಪ್ಪು ಮಾಡಲು ಹಿಂಜರಿಯುವುದಿಲ್ಲ. ಆದ್ದರಿಂದ ಇತರರಿಗೆ ಪಾಠವಾಗುವಂತೆ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಸ್ವಾಮಿ ವಿವೇಕಾನಂದ ಭಗತ್‌ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಂ.ಆರ್. ಮಹೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವುದು ಬಿಟ್ಟು ಸಂಭ್ರಮದಲ್ಲಿ ತೊಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಎ.ಬಿ. ಹನುಮಂತಪ್ಪ ಮಾತನಾಡಿ, ಹತ್ತು ದಿನಗಳ ಅಂತರದಲ್ಲಿ ನೇಹಾ ಹಿರೇಮಠ್ ಹಾಗೂ ಅಂಜಲಿ ಹತ್ಯೆ ನಡೆದಿದೆ. ಸರ್ಕಾರ ಹತ್ಯೆ ವಿಚಾರದಲ್ಲಿ ಉಡಾಫೆ ಉತ್ತರ ನೀಡುತ್ತಿರುವುದು ಸರಿಯಲ್ಲ. ಮೊದಲು ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಲಿ ಎಂದು ಒತ್ತಾಯಿಸಿದರು.

ಗಂಗಾಮತ ಸಮಾಜದ ತಾಲೂಕು ಸಂಚಾಲಕ ಕೆ. ದೇವೇಂದ್ರಪ್ಪ ಮಾತನಾಡಿದರು. ಕೆ.ವಿ. ಚನ್ನಪ್ಪ, ಗಂಗಾಮತ ಸಮಾಜದ ತಾಲೂಕು ಗೌರವಾಧ್ಯಕ್ಷ ಕೆ. ರಾಜಪ್ಪ, ಉಪಾಧ್ಯಕ್ಷ ಜೆ. ಹಳದಪ್ಪ, ಕಾರ್ಯದರ್ಶಿ ಚೀಲೂರು ಲೋಕೇಶ್, ಪದಾಧಿಕಾರಿಗಳಾದ ನರಸಿಂಹ, ಪಿ.ಎಂ. ಮಲ್ಲಿಕಾರ್ಜನ, ಆರ್. ತಿಪ್ಪೇಶ್, ಶಿವಪ್ಪ, ಎಚ್. ಚನ್ನೇಶ್, ಎನ್. ರಾಘವೇಂದ್ರ, ಶೇಖರಪ್ಪ, ಶ್ರೀನಿವಾಸ್, ಗೋವಿಂದರಾಜ, ಚಂದ್ರಪ್ಪ, ಮಂಜಪ್ಪ, ಗುರುಮೂರ್ತಿ, ಮಲ್ಲಿಕಾರ್ಜನ್, ಹನುಮಂತಪ್ಪ, ವೆಂಕಟೇಶ್, ಮಂಜುನಾಥ್, ಬಸವರಾಜ್, ಶಂಕರ್, ಸುರೇಶ್, ಎಚ್. ರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net