ಮೆಡಿಕಲ್ ಹಬ್ ಆಗಲಿದೆ ಹುಬ್ಬಳ್ಳಿ

h27-NMR Scan Center
Published on

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯು ದಿನೇ ದಿನೆ ಅಭಿವೃದ್ಧಿ ಹೊಂದುತ್ತಿದೆ. ಅದರಲ್ಲೂ ಅತ್ಯಾಧುನಿಕ ವೈದ್ಯಕೀಯ ಪರಿಕರ, ತಜ್ಞ ವೈದ್ಯರ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ಮುಂದೊಂದು ದಿನ ಹುಬ್ಬಳ್ಳಿ ‘ಮೆಡಿಕಲ್ ಹಬ್’ ಆಗುವುದರಲ್ಲಿ ಸಂದೇಹವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಎದುರಿನ ಶಿವಶೀಲ ಮಲ್ಟಿಪ್ಲೆಕ್ಸ್ ಕಟ್ಟಡದಲ್ಲಿರುವ ಎನ್​ಎಂಆರ್ ಸ್ಕ್ಯಾನ್ ಸೆಂಟರ್​ನ 4ನೇ ಶಾಖೆ ಉದ್ಘಾಟಿಸಿದ ನಂತರ, ಖಾಸಗಿ ಹೋಟೆಲ್​ನಲ್ಲಿ ಭಾನುವಾರ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೋಗ ನಿರ್ಧಾರದ ಹಿಂದೆ ತಂತ್ರಜ್ಞಾನವಿದೆ. ಇಂಥ ಅತ್ಯಾಧುನಿಕ ತಂತ್ರಜ್ಞಾನಗಳು ಹುಬ್ಬಳ್ಳಿಗೆ ಬರುವುದರಿಂದ ಉತ್ತರ ಕರ್ನಾಟಕದ ಜನರು ವೈದ್ಯಕೀಯ ಚಿಕಿತ್ಸೆಗಾಗಿ ಬೇರೆ ನಗರ ಪ್ರದೇಶಕ್ಕೆ ಹೋಗುವುದು ತಪ್ಪಲಿದೆ ಎಂದರು.

ವಿಶ್ವದಲ್ಲಿ ಭಾರತದ ಜನಸಂಖ್ಯೆ ಹೆಚ್ಚಿದೆ. ವಿವಿಧ ಕ್ಷೇತ್ರದಲ್ಲಿ ತಜ್ಞರ ಸಂಖ್ಯೆ ವೃದ್ಧಿಯಾಗುತ್ತಿದೆ. ಅದರಲ್ಲೂ ವೈದ್ಯರು, ನರ್ಸಿಂಗ್, ಟೆಕ್ನೇಷಿಯನ್​ಗಳು ಇರುವುದರಿಂದ ಭಾರತವು ಮುಂದೊಂದು ದಿನ ವಿಶ್ವದಲ್ಲಿಯೇ ಮೆಡಿಕಲ್ ಹಬ್ ಆಗಲಿದೆ. ನಾವು ಈಗಾಗಲೇ ರಫ್ತು ನೀತಿಯಲ್ಲಿ ತಂದ ಬದಲಾವಣೆಗಳಿಂದ ವಿವಿಧ ರಾಷ್ಟ್ರಗಳಿಗೆ ಬಹಳಷ್ಟು ಆಹಾರೋತ್ಪಾದನೆ, ಸರಕಗಳನ್ನು ರಫ್ತು ಮಾಡುತ್ತಿದ್ದೇವೆ ಎಂದರು.

ಕಾರ್ವಿುಕ ಸಚಿವ ಸಂತೋಷ ಲಾಡ್ ಮಾತನಾಡಿ, ಈಗೀಗ ವೈದ್ಯಕೀಯ ರಂಗದಲ್ಲಿ ತಂತ್ರಜ್ಞಾನ ಆಗಮಿಸುತ್ತಿದೆ. ಇದಕ್ಕೂ ಮೊದಲು ಡಾ.ಎಂ.ಎಂ. ಜೋಶಿ ಅವರು ಹಗಲು-ರಾತ್ರಿ ರೋಗಿಗಳ ಸೇವೆ ಮಾಡಿದ್ದಾರೆ. ಇಂಥವರಿಗೆ ನಮ್ಮ ದೇಶದ ಅತ್ಯುನ್ನತ ‘ಭಾರತರತ್ನ’ದಂಥ ಪ್ರಶಸ್ತಿ ಲಭಿಸಬೇಕು ಎಂದು ಅಭಿಪ್ರಾಯಪಟ್ಟರು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಎನ್​ಎಂಆರ್ ಸ್ಕ್ಯಾನ್ ಸೆಂಟರ್ ಹುಬ್ಬಳ್ಳಿಗೆ ಆಗಮಿಸಿದಾಗಿನಿಂದ ವೈದ್ಯರಿಗೆ ರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸುಲಭವಾಗಿದೆ. ಉತ್ತರ ಕರ್ನಾಟಕದ ರೋಗಿಗಳಿಗೆ ಇದು ಸಂಜೀವಿನಿಯಾಗಿದೆ ಎಂದರು.

ಎನ್​ಎಂಆರ್ ಮಂಡಳಿಯ ಚೇರ್ಮನ್ ಪದ್ಮಶ್ರೀ ಡಾ. ಎಂ.ಎಂ. ಜೋಶಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವ್ಯವಸ್ಥಾಪಕ ನಿರ್ದೇಶಕ ಡಾ. ರವಿ ಕಲಘಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಡಳಿಯ ಡಾ. ನರೇಂದ್ರ ಶಾ, ಡಾ. ಅಶೋಕ ಕಲಂದಾನಿ, ಡಾ. ಶ್ರೀನಿವಾಸ ಜೋಶಿ, ನರರೋಗ ತಜ್ಞ ಡಾ. ಸುರೇಶ ದುಗಾಣಿ, ಕ್ಯಾನ್ಸರ್ ತಜ್ಞ ಡಾ.ಬಿ.ಆರ್. ಪಾಟೀಲ, ಎಲುಬು ಮತ್ತು ಕೀಲು ತಜ್ಞ ಡಾ. ಸಚಿನ್ ರೇವಣಕರ, ಡಾ. ಸುಹಾಸ ಕಲಘಟಗಿ, ಡಾ. ಪದ್ಮಾ ಸತ್ಯಮೂರ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net