ಟೆಂಡರ್ ಶ್ಯೂರ್ ರಸ್ತೆಗೆ ಬೆಳಕು ಚೆಲ್ಲಿ,  ಸ್ಥಳೀಯರ ಬೇಡಿಕೆಗೆ ಪರಿಹಾರ ಎಲ್ಲಿ?

IMG-20250128-WA0022.jpg
Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಕಾಡಸಿದ್ದೇಶ್ವರ ಕಾಲೇಜು ಎದುರಿನಿಂದ ತೋಳನಕೆರೆ ವರೆಗಿನ ಟೆಂಡರ್ ಶ್ಯೂರ್ ರಸ್ತೆ ಹುಬ್ಬಳ್ಳಿ ಧಾರವಾಡ ಅವಳಿನಗರದ ಮಟ್ಟಿಗೆ ಮಾದರಿ ರಸ್ತೆ ಎಂದು ಹೆಸರು ವಾಸಿಯಾಗಿದೆ.

ಕೇವಲ 2.5 ಕಿ.ಮೀ. ರಸ್ತೆಗೆ ಸುಮಾರು 40 ಕೋಟಿ ರೂ. ವೆಚ್ಚ ಮಾಡಿ ಅತ್ಯಂತ ಸುಸಜ್ಜಿತ ಹಾಗೂ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಇದನ್ನು ನಿರ್ಮಿಸಲಾಗಿದೆ.

ಸಂಪೂರ್ಣ ಭೂಗತ ಕೇಬಲಿಂಗ್, ಆಧುನಿಕ ಬೀದಿದೀಪ, ಗಟಾರು, ಒಳಚರಂಡಿ ವ್ಯವಸ್ಥೆ ಹೀಗೆ ಹಲವು ವೈಶಿಷ್ಟ್ಯಗಳು ಈ ರಸ್ತೆಗೆ ಇವೆ. ಆದರೆ, ಕಳೆದ ಹಲವು ತಿಂಗಳಿಂದ ಈ ರಸ್ತೆಯ ಕೆಲ ಭಾಗದಲ್ಲಿ ಬೀದಿದೀಪಗಳು ಉರಿಯದೇ ಸ್ಥಳಿಯರು ತೊಂದರೆ ಅನುಭವಿಸುತ್ತಿದ್ದಾರೆ. ಬೀದಿದೀಪಗಳು ಆರಿ ಹೋಗಿ ಎಷ್ಟೋ ದಿನಗಳು ಕಳೆದವು. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿಲ್ಲ.

ರಾತ್ರಿಯಾದರೆ ಇಲ್ಲಿ ಒಬ್ಬರ ಮುಖ ಇನ್ನೊಬ್ಬರಿಗೆ ಕಾಣುವುದಿಲ್ಲ. ಇಷ್ಟೊಂದು ಕತ್ತಲು ಇರುವಾಗ ಅಕ್ರಮ, ಅಪರಾಧಿಕ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಈ ಬಗ್ಗೆ ಸ್ಥಳಿಯರು ದೂರು ನೀಡಿದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಂಡಿಲ್ಲ ಎಂಬುದು ನಿವಾಸಿಗಳ ಅಳಲು.

ಬೀದಿ ದೀಪ ಸರಿಪಡಿಸಿ ಎಂದು ಮಹಾನಗರ ಪಾಲಿಕೆಗೆ ದೂರು ನೀಡಿದರೆ, ಟೆಂಡರ್ ಶ್ಯೂರ್ ರಸ್ತೆ ನಮಗೆ ಸಂರ್ಪೂಣ ಹಸ್ತಾಂತರ ಆಗಿಲ್ಲ. ನೀವು ಪಿಡಬ್ಲೂಡಿ ಅಧಿಕಾರಿಗಳನ್ನು ಕೇಳಿ ಎಂದು ಜಾರಿಕೊಳ್ಳುತ್ತಾರೆ. ಎರಡು ಇಲಾಖೆಗಳ ಮಧ್ಯೆ ಮಾದರಿ ರಸ್ತೆಯ ಅಕ್ಕಪಕ್ಕದಲ್ಲಿ ಇರುವ ನಿವಾಸಿಗಳು ತೊಂದರೆ ಅನುಭವಿಸುವುದು ಮಾತ್ರ ತಪ್ಪಿಲ್ಲ ಎಂದು ಪ್ರಭುಲಿಂಗಪ್ಪ ಅಂಕಲಕೋಟಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net