ತಾರಿಹಾಳ ಅಗ್ನಿ ದುರಂತ ಪ್ರಕರಣ, ಮೃತರ ಸಂಖ್ಯೆ ಐದಕ್ಕೆ ಏರಿಕೆ

FIRE
Published on

ಹುಬ್ಬಳ್ಳಿ: ಇಲ್ಲಿನ ಹೊರವಲಯ ತಾರಿಹಾಳ ಕೈಗಾರಿಕಾ ವಸಾಹತುವಿನ ಐ.ಸಿ.ಫ್ಲೇಮ್​ ಸ್ಪಾರ್ಕಲ್​ ಕ್ಯಾಂಡಲ್​ ತಯಾರಿಕಾ ಕಾರ್ಖಾನೆಯಲ್ಲಿ ಜು.23ರಂದು ಸಂಭವಿಸಿದ ಅಗ್ನಿ ದುರಂತದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಮಹಿಳೆ ಸೋಮವಾರ ಮೃತಪಟ್ಟಿದ್ದಾರೆ. ಈ ಮೂಲಕ ಗಾಯಗೊಂಡಿದ್ದ 8 ಜನರ ಪೈಕಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ.
ತಾಲೂಕಿನ ಭಂಡಿವಾಡ ಗ್ರಾಮದ ನಿರ್ಮಲಾ ಸಿದ್ದಪ್ಪ ಹುಚ್ಚನ್ನವರ (29) ಮೃತಪಟ್ಟವರು. ಕ್ಯಾಂಡಲ್​ ತಯಾರಿಸುವ ವೇಳೆ ಅಗ್ನಿ ಅವಢ ಸಂಭವಿಸಿತ್ತು. ಈ ವೇಳೆ ಕಾರ್ಖಾನೆಯಲ್ಲಿದ್ದ ಎಂಟು ಜನರೂ ಗಾಯಗೊಂಡು ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಈವರೆಗೆ ಐವರು ಮೃತಪಟ್ಟಿದ್ದಾರೆ. ಉಳಿದ ಮೂವರು ಗಾಯಾಳುಗಳಿಗೆ ಕಿಮ್ಸ್​ನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಫ್ಯಾಕ್ಟರಿ ಮಾಲೀಕನ ಬಂಧನ
ಅಗ್ನಿ ದುರಂತ ಸಂಭವಿಸಿದ ಕೂಡಲೇ ತಲೆಮರೆಸಿಕೊಂಡಿದ್ದ ಐ.ಸಿ.ಫ್ಲೇಮ್​ ಸ್ಫಾರ್ಕಲ್​ ಕ್ಯಾಂಡಲ್​ ಫ್ಯಾಕ್ಟರಿ ಮಾಲೀಕ ಅಬ್ದುಲ್​ ಶೇಖ್​ ಶಿರಹಟ್ಟಿಯನ್ನು ಗ್ರಾಮೀಣ ಠಾಣೆ ಇನ್​ಸ್ಪೆಕ್ಟರ್​ ರಮೇಶ ಗೋಕಾಕ ನೇತೃತ್ವದ ತಂಡ ಸೋಮವಾರ ಧಾರವಾಡದ ಟೋಲ್​ ಬಳಿ ಬಂಧಿಸಿದೆ. ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದ ಈತನನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಈತನ ಇಬ್ಬರು ಪಾಲುದಾರರು ಇನ್ನೂ ಪತ್ತೆಯಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net