

ಹುಬ್ಬಳ್ಳಿ : ಅಂಗವಿಕಲತೆ ಹಾಗೂ ಬಡತನ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಹುಬ್ಬಳ್ಳಿಯ ಅಂಗವಿಕಲ ಕ್ರೀಡಾಪಟು ನಿಲೋಫರ್ ಶಮ್ಸುದ್ದೀನ್ ಧಾರವಾಡ ಅತ್ಯುತ್ತಮ ಉದಾಹರಣೆ.
24ರ ಹರೆಯದ ನಿಲೋಫರ್ ಜಾವಲಿನ್, ಶಾಟ್ಫುಟ್ ಹಾಗೂ ಆಮ್ರ್ ರೆಸ್ಲಿಂಗ್ನಲ್ಲಿ ಹತ್ತಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 11ನೇ ವಯಸ್ಸಿನಲ್ಲಿ ಎಡಗೈ ಮೇಲೆ ವಿದ್ಯುತ್ ತಂತಿ ಬಿದ್ದು, ಕೈ ಕಳೆದುಕೊಂಡಿದ್ದಾರೆ. ಹಮಾಲಿ ಕೆಲಸ ಮಾಡುತ್ತಿದ್ದ ಈಕೆಯ ತಂದೆ ಕಳೆದ ಒಂದೂವರೆ ವರ್ಷದ ಹಿಂದೆ ನಿಧನ ಹೊಂದಿದ್ದಾರೆ. ಇದೀಗ ಹಿರಿಯ ಸಹೋದರ ಹಮಾಲಿ ಕೆಲಸ ಮಾಡುತ್ತಿದ್ದು, ಆತನೇ ಕುಟುಂಬ ನಿರ್ವಹಣೆ ಮಾಡುತ್ತಿದ್ದಾನೆ.
ನಿಲೋಫರ್ ಹೈಸ್ಕೂಲ್ನಲ್ಲಿ ಇದ್ದಾಗ ಶಾಲಾ ಮಟ್ಟದಲ್ಲಿ ಕೆಲವು ಕ್ರೀಡೆಗಳಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ತೋರಿದ್ದರು. ಅಂದಿನಿಂದ ಜಾವಲಿನ್, ಶಾಟ್ಫುಟ್, ಆಮ್ರ್ ರೆಸ್ಲಿಂಗ್ನಲ್ಲಿ ತೊಡಗಿಕೊಂಡು, ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಕಳೆದ ಮೇ 26ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಆಯೋಜಿಸಿದ್ದ ನ್ಯಾಷನಲ್ ಆಮ್ರ್ ರೆಸ್ಲಿಂಗ್ ಪ್ಯಾರಾ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಮೇ 4 ರಿಂದ 7ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ 5ನೇ ಇಂಡಿಯನ್ ಓಫನ್ ಪ್ಯಾರಾ ಅಥ್ಲೆಟಿಕ್ಸ್ ಇಂಟರ್ನ್ಯಾಷನಲ್ ಚಾಂಪಿಯನ್ಶಿಪ್ನಲ್ಲಿ ಜಾವಲಿನ್ ಎಸೆತದಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಈಗಲೂ ವಾರದಲ್ಲಿ ಮೂರು ದಿನ ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣ ಹಾಗೂ ಎರಡು ದಿನ ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಜಾವಲಿನ್, ಶಾಟ್ಫುಟ್ನ ತರಬೇತಿ ಪಡೆಯುತ್ತಿದ್ದಾರೆ. ನೆಹರು ಕಾಲೇಜಿನಲ್ಲಿ ಬಿಕಾಂ ಮುಗಿಸಿರುವ ನಿಲೋಫರ್, ಸರ್ಕಾರ ತನ್ನ ಸಾಧನೆ ಗಮನಿಸಿ ಕ್ರೀಡಾಮೀಸಲಾತಿ ಉದ್ಯೋಗ ಕೊಟ್ಟರೆ ಕುಟುಂಬ ನಿರ್ವಹಣೆ ಮಾಡಬಹುದೆಂಬ ಆಶಯ ಹೊಂದಿದ್ದಾರೆ.