ಭಕ್ತಸಾಗರದ ಮಧ್ಯೆ ಸಿದ್ಧಾರೂಢರ ತೆಪ್ಪೋತ್ಸವ,  ಮೊಳಗಿದ ಓಂ ನಮಃ ಶಿವಾಯ ಮಂತ್ರ

IMG-20250810-WA0029-1.jpg
Published on

ಹುಬ್ಬಳ್ಳಿ: ಓಂ ನಮಃ ಶಿವಾಯ, ಹರ್ ಹರ್ ಮಹಾದೇವ… ಜಯಘೋಷಗಳ ಮಧ್ಯೆ ಇಲ್ಲಿಯ ಶ್ರೀ ಸಿದ್ಧಾರೂಢ ಮಠ ಆವರಣದ ಪುಷ್ಕರಣಿಯಲ್ಲಿ ಭಾನುವಾರ ಸಿದ್ಧಾರೂಢರ ಜಲರಥೋತ್ಸವ ಸಡಗರ ಸಂಭ್ರಮದಿಂದ ನೆರವೇರಿತು.

ಶ್ರಾವಣ ಮಾಸ ಹಾಗೂ ಶ್ರೀ ಸಿದ್ಧಾರೂಢರ 96ನೇ ಪುಣ್ಯಾರಾಧನೆ ಅಂಗವಾಗಿ ಏರ್ಪಡಿಸಿದ್ದ ತೆಪ್ಪೋತ್ಸವಕ್ಕೆ ಭಕ್ತ ಸಾಗರವೇ ಹರಿದು ಬಂತು. ಹುಬ್ಬಳ್ಳಿ ಧಾರವಾಡ ಮಾತ್ರವಲ್ಲ ರಾಜ್ಯದ ವಿವಿಧ ಜಿಲ್ಲೆಗಳು, ಗೋವಾ, ಮಹಾರಾಷ್ಟ್ರದಿಂದಲೂ ಭಕ್ತರು ಬಂದಿದ್ದರು.

ಪುಷ್ಕರಣಿ ಸುತ್ತಲೂ ಕಿಕ್ಕಿರಿದು ತುಂಬಿದ್ದ ಭಕ್ತ ಸಮೂಹದ ಮಧ್ಯೆ ಸಂಜೆ ಜಲರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಬಿದಿರಿನಿಂದ ತಯಾರಿಸಿದ ತೆಪ್ಪ ಹಾಗೂ ತೇರಿನಲ್ಲಿ ಸಿದ್ಧಾರೂಢರು ಹಾಗೂ ಗುರುನಾಥರೂಢರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಹೂವು, ದೀಪಗಳಿಂದ ಅಲಂಕರಿಸಲಾಗಿತ್ತು. ಅಲಂಕೃತ ರಥಕ್ಕೆ ಶ್ರೀಮಠದ ಭಕ್ತರ ಮೇಲ್ಮನೆ ಅಧ್ಯಕ್ಷ ಡಿ.ಆರ್. ಪಾಟೀಲ ಹಾಗೂ ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಚನ್ನವಿರ ಮುಂಗರವಾಡಿ ಅವರು ಪೂಜೆ ನೆರವೇರಿಸಿ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು.

ತೇರು ಸಾಗುತ್ತಿದ್ದಂತೆ ಸಾವಿರಾರು ಭಕ್ತರು ಉತ್ತತ್ತಿ ಮತ್ತು ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಡೊಳ್ಳು ಮತ್ತು ಹಲಗೆ ವಾದನಗಳು ಮೊಳಗಿದವು. ಭಕ್ತರು ಓಂ ನಮಃ ಶಿವಾಯ, ಸಿದ್ಧಾರೂಢ ಮಹಾರಾಜ್ ಕೀ ಜೈ, ಗುರುನಾಥರೂಢ ಮಹಾರಾಜ್ ಕೀ ಜೈ ಘೋಷಣೆಗಳನ್ನು ಮೊಳಗಿಸಿದರು.

ಶ್ರಾವಣ ಮಾಸದಲ್ಲಿ ನಡೆಯುವ ಶ್ರೀಗಳ ಪುಣ್ಯಾರಾಧನೆಗೆ ರಾಜ್ಯದ ವಿವಿಧ ಕಡೆಗಳಿಂದ ಅನೇಕ ಭಕ್ತರು ಪಾದಯಾತ್ರೆ, ವಾಹನ, ಟ್ರಾಕ್ಟರ್, ಇತ್ಯಾದಿ ವಾಹನಗಳ ಮೂಲಕ ಆಗಮಿಸಿದ್ದರು. ಶ್ರೀಮಠದ ಆವರಣದಲ್ಲಿ ಎಲ್ಲೆಡೆ ಭಕ್ತರ ದಂಡು ಕಾಣಿಸುತ್ತಿತ್ತು. ತೆಪ್ಪೋತ್ಸವ ವೀಕ್ಷಿಸಿದ ಭಕ್ತರು ಉಭಯ ಶ್ರೀಗಳ ಗದ್ದುಗೆ ದರ್ಶನ ಪಡೆದರು.

ಎಲ್ಲೆಡೆ ಶಿವನಾಮ ಭಜನೆ ಕೇಳಿ ಬರುತ್ತಿತ್ತು.
ಅನೇಕ ಸಂಘ ಸಂಸ್ಥೆಯವರು ಆವರಣದಲ್ಲಿ ಅನ್ನ ಸಂತರ್ಪಣೆ, ಪ್ರಸಾದ ವಿತರಣೆ ವ್ಯವಸ್ಥೆ ಮಾಡಿದ್ದರು. ಭಕ್ತರು ಸರದಿಯಲ್ಲಿ ನಿಂತು ಪ್ರಸಾದ ಸ್ವೀಕರಿಸಿದರು.

ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿಯ ವಿನಾಯಕ ಘೋಡಕೆ, ರಮೇಶ ಬೆಳಗಾವಿ, ಶಾಮಾನಂದ ಪೂಜೇರಿ, ಮಂಜುನಾಥ ಮುನವಳ್ಳಿ, ಡಾ. ಗೋವಿಂದ ಮಣ್ಣೂರ, ಬಸವರಾಜ ಕಲ್ಯಾಣಶೆಟ್ಟರ್, ಸರ್ವಮಂಗಳಾ ಪಾಠಕ, ಗೀತಾ ಕಲಬುರಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net