

ಹುಬ್ಬಳ್ಳಿ : ಪ್ರಾಪಂಚಿಕ ಚಿಂತನೆಯಿಂದ ಅಶಾಂತಿ ಹಾಗೂ ಭಗವಂತನ ಚಿಂತನೆಯಿಂದ ಪರಮಶಾಂತಿ ಲಭಿಸುತ್ತದೆ ಎಂದು ಕಾಡರಕೊಪ್ಪ ಪೂರ್ಣಾನಂದ ಆಶ್ರಮದ ಶ್ರೀ ದಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಮಂಗಳವಾರ ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಆಯೋಜಿಸಿದ್ದ ಜುಲೈ 14ರವರೆಗೆ ನಡೆಯುವ 15ನೇ ವರ್ಷದ ಭಗವಚ್ಚಿಂತನ ಸಾಧನ ಶಿಬಿರದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಪರಮ ಶಾಂತಿ ನೀಡುವ ಹಾಗೂ ಜಾತ್ಯಾತೀತವಾಗಿ ಸರ್ವರಿಗೂ ಅದ್ವೈತ ವೇದಾಂತ ತತ್ವ ಬೋಧಿಸಿ, ನಿಜ ಸುಖದಲ್ಲಿರಿಸುವ ಏಕೈಕ ಸ್ಥಾನವೆಂದರೆ ಅದು ಹುಬ್ಬಳ್ಳಿಯ ಜಗದ್ಗುರು ಶ್ರೀ ಸಿದ್ಧಾರೂಢ ಮಠ ಎಂದು ಹೇಳಿದರು.
ಗೋಕಾಕದ ಶ್ರೀ ಶಾಮಾನಂದ ಆಶ್ರಮದ ಸದ್ಗುರು ಶ್ರೀ ಅತ್ಯಾನಂದ ಸ್ವಾಮೀಜಿ ಮಾತನಾಡಿ, ಭಗವಂತನ ನಾಮಸ್ಮರಣೆ, ಚಿಂತನೆ ಮಾಡುವುದರಿಂದ ಮನಸ್ಸಿನ ನೆಮ್ಮದಿ, ಶಾಂತಿ ನೆಲೆಸುವುದು ಎಂದು ತಿಳಿಸಿದರು.
ಚಿಕ್ಕನಂದಿ ಶ್ರೀ ಸಿದ್ಧಾರೂಢರ ದರ್ಶನ ಪೀಠದ ಪೀಠಾಧ್ಯಕ್ಷ ಸಹಜಯೋಗಿ ಶ್ರೀ ಸಹಜಾನಂದ ಸ್ವಾಮೀಜಿ ಮಾತನಾಡಿದರು. ಶ್ರೀ ಬಸವರಾಜ ಸ್ವಾಮೀಜಿ ಹಾಗೂ ಶ್ರೀ ಸದಾಶಿವ ಗುರೂಜಿ ಸಮ್ಮುಖ ವಹಿಸಿದ್ದರು. ಶ್ರೀ ಮಠದ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಠದ ಧರ್ಮದರ್ಶಿ ಶಾಮಾನಂದ ಪೂಜೇರಿ ಪ್ರಾಸ್ತವಿಕವಾಗಿ ಮಾತನಾಡಿದರು.
ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ಬಾಳು ಮಗಜಿಕೊಂಡಿ, ಚನ್ನವೀರ ಮುಂಗುರವಾಡಿ, ಗೀತಾ ಕಲಬುರ್ಗಿ, ಮ್ಯಾನೇಜರ್ ಈರಣ್ಣ ತುಪ್ಪದ ಹಾಗೂ ಇತರರು ಉಪಸ್ಥಿತರಿದ್ದರು.
ಗುರುಸಿದ್ದಪ್ಪ ಕುಲಗೋಡ ಪ್ರಾರ್ಥಿಸಿದರು. ಎಸ್.ಐ. ಕೋಳಕೂರ ನಿರೂಪಿಸಿದರು. ಶ್ರೀ ಮಠ ಟ್ರಸ್ಟ್ನ ವೈಸ್ ಚೇರ್ಮನ್ ಉದಯಕುಮಾರ ನಾಯ್ಕ ವಂದಿಸಿದರು.