

ವಿಜಯವಾಣಿ ಸುದ್ದಿಜಾಲ ಧಾರವಾಡ
ಹುಬ್ಬಳ್ಳಿಯ ಗಲಭೆ ಪ್ರಕರಣ ವಾಪಸ್ ಪಡೆದ ಸರ್ಕಾರದ ನಿರ್ಧಾರ ಸರಿಯಾಗಿದೆ. ಬಿಜೆಪಿಯವರು ಬೇಕಾದರೆ ಪ್ರತಿಭಟನೆ ಮಾಡಿಕೊಳ್ಳಲಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ ಬಿಜೆಪಿಯವರು ಪ್ರತಿಭಟನೆ ಮಾಡಲಿ ಬೇಡ ಎಂದವರಾರು? ವಕೀಲರು ಕೋರ್ಟ್ಗೆ ಹೋಗಲಿ, ಕೋರ್ಟ್ ಇರುವುದು ವಿಚಾರಣೆ ಮಾಡಲು ಎಂದರು.
ಮುಡಾ ಸೈಟ್ ವಿಚಾರವಾಗಿ ಬಿಜೆಪಿಯವರು ಪಾದಯಾತ್ರೆ ಮಾಡಿದರು. ಅದೇ ಬಿಜೆಪಿಯವರ ಮೇಲೆ ಎಷ್ಟು ಎ-ïಐಆರ್‌ಗಳಿವೆ ಎಂಬುದನ್ನು ನೋಡಿಕೊಳ್ಳಲಿ. ಕೇಂದ್ರ ಸಚಿವರ ಮೇಲೆ ಶೇ. 39ರಷ್ಟು ಕೇಸ್ ಇವೆ. ಅವರನ್ನು ಒಳಗೆ ಹಾಕಬೇಕಿತ್ತು. ಅವರಿಂದ ರಾಜೀನಾಮೆ ಕೇಳಬೇಕಿತ್ತು. ಯಾರು ಮುಡಾ ವಿಚಾರವಾಗಿ ಪಾದಯಾತ್ರೆ ಮಾಡಿದರೋ ಅವರು ತಮ್ಮ ಚುನಾವಣಾ ಅಫಿಡವಿಟ್ ತೆರೆದು ನೋಡಿಕೊಳ್ಳಲಿ ಎಂದರು.
ನಮ್ಮ ದೇಶದಲ್ಲಿ ಕಾನೂನು ಇದೆ. ಕಾನೂನು ರಕ್ಷಣೆ ಪಡೆಯುವ ಅಽಕಾರ ಎಲ್ಲರಿಗೂ ಇದೆ. ಹುಬ್ಬಳ್ಳಿ ಗಲಭೆ ಇರಲಿ, ಮುಡಾ ಇರಲಿ. ದೇಶದಲ್ಲಿ ಕಾನೂನು ಗೆಲ್ಲಬೇಕು. ಅದಕ್ಕೆ ಅವಕಾಶ ಕೊಡಬೇಕು. ಹಲವು ಪ್ರಕರಣಗಳಲ್ಲಿ ಅಮಾಯಕರನ್ನು ಜೈಲಿಗೆ ಹಾಕಲಾಗಿತ್ತು. ಮನೆ ಹುಡುಕಿಕೊಂಡು ಬಂದು ಪ್ರಕರಣ ದಾಖಲಿಸಿರುವ ಉದಾಹರಣೆ ಕೂಡ ಇವೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ಸೈಟ್ ವಾಪಸ್ ಕೊಟ್ಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು, ಸೈಟ್ ವಾಪಸ್ ಕೊಟ್ಟಿದ್ದಾರೆ ಎಂದರೆ ಅದು ಅವರ ದೊಡ್ಡ ಗುಣ. ಅದಕ್ಕೆ ಬಿಜೆಪಿಯವರು ಖುಷಿಯಾಗಬೇಕು. ರಾಜೀನಾಮೆ ಏಕೆ ಕೇಳಬೇಕು? ಎಂದು ಪ್ರಶ್ನಿಸಿದರು.
ಅತಿಥಿ ಶಿಕ್ಷಕರು ಹಾಗೂ ಅಡುಗೆ ಸಹಾಯಕರ ವೇತನ ಹೆಚ್ಚಳ ಮಾಡಬೇಕಿದೆ. ಈ ಬಗ್ಗೆ ಸಿಎಂ ಜೊತೆ ಮಾತನಾಡಿದ್ದೇನೆ. ಶಿಕ್ಷಕರು ಶ್ರಮ ಪಟ್ಟು ಕೆಲಸ ಮಾಡುತ್ತಾರೆ. ಅವರ ವೇತನ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಮು0ಬರುವ ಉಪ ಚುನಾವಣೆಯಲ್ಲಿ ಹೈಕಮಾಂಡ್ ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತದೆ. ನಾವೆಲ್ಲ ಸೇರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ ಎಂದರು.