ಗಾಳಿ ಮಳೆಗೆ ಹುಬ್ಬಳ್ಳಿ ಅಸ್ತವ್ಯಸ್ತ, ಮಳೆ ನಿಂತು ಹೋದ ಮೇಲೆ… ನಿಲ್ಲದ ಜನರ ಪರದಾಟ

IMG_20240511_171132_152-1.jpg
Published on

ಹುಬ್ಬಳ್ಳಿ: ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಹುಬ್ಬಳ್ಳಿಯಲ್ಲಿ ಶನಿವಾರ ಮಧ್ಯಾಹ್ನ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಸುರಿದ ಸಿಡಿಲು, ಗಾಳಿ, ಮಳೆ ಜನಜೀವನ ಸಂರ್ಪೂಣ ಅಸ್ತವ್ಯಸ್ತಗೊಳಿಸಿತು.

ಒಂದೆಡೆ ವಾತಾವರಣ ತಂಪಾದರೆ, ಇನ್ನೊಂದೆಡೆ ತಗ್ಗು ಪ್ರದೇಶದ ಮನೆ, ಅಪಾರ್ಟಮೆಂಟ್, ವಸತಿ ಬಡಾವಣೆಗಳಿಗೆ ನೀರು ನುಗ್ಗಿ ಜನರ ನೆಮ್ಮದಿ ಕದಡಿತು. ರಾತ್ರಿಯೂ ಮಳೆ ಸುರಿದದ್ದರಿಂದ ಜನರು ತಲ್ಲಣಗೊಂಡರು.

ವಾಣಿಜ್ಯನಗರಿ ಹುಬ್ಬಳ್ಳಿಯ ದಾಜಿಬಾನಪೇಟ, ಕಮರಿಪೇಟ, ದುರ್ಗದಬೈಲ್, ಕೋಯಿನ್ ರಸ್ತೆ, ವಿದ್ಯಾನಗರ, ಮೇದಾರ ಓಣಿ, ಹಳೇಹುಬ್ಬಳ್ಳಿ ಮುಂತಾದ ಕಡೆಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿತ್ತು. ಅಲ್ಲದೇ ಬೀದಿಬದಿ ವ್ಯಾಪಾರ, ವಾಣಿಜ್ಯ ಮಳಿಗೆಗಳಿಗೂ ಹಾನಿ ಮಾಡಿದೆ. ರಸ್ತೆಗಳೆಲ್ಲ ತುಂಬಿ ಹರಿದವು. ಇದರಿಂದ ಸಂಚಾರ ಕೆಲಹೊತ್ತು ಸ್ಥಗಿತಗೊಂಡಿತ್ತು.

ಕೋಯಿನ್ ರಸ್ತೆ, ದಾಜಿಬಾನಪೇಟೆಯ ರಸ್ತೆಯಲ್ಲಿ ಬೈಕ್, ಕಾರುಗಳು ಮುಳುಗುವಷ್ಟು ನೀರು ನಿಂತಿತ್ತು.

ಸರಿಯಾಗದ ಚರಂಡಿ ವ್ಯವಸ್ಥೆ: ಹುಬ್ಬಳ್ಳಿಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಪ್ರತಿ ಬಾರಿ ದೊಡ್ಡ ಮಳೆ ಬಂದಾಗಲೂ ಸಮಸ್ಯೆ ಎದುರಿಸುವಂತಾಗಿದೆ. ಶನಿವಾರ ಭಾರಿ ಮಳೆಗೆ ಒಳಚರಂಡಿ ಕೊಳಚೆ ಹರಿದು ಹೋಗಲು ಸರಿಯಾದ ಮಾರ್ಗ ಇಲ್ಲದೇ ರಸ್ತೆಗೆ ಬಂದಿತ್ತು.

ಇದರಿಂದ ರಸ್ತೆಯಲ್ಲಿ ನಿಂತಿದ್ದ ನೂರಾರು ವಾಹನಗಳು ನೀರು ಹೊಕ್ಕು ತೊಂದರೆಗೀಡಾದವು. ಅಕ್ಕಪಕ್ಕದ ಮನೆಗಳಿಗೂ ಕೊಳಚೆ ಹೊಕ್ಕು ಅವಾಂತರ ಸೃಷ್ಟಿ ಮಾಡಿತ್ತು.
ಮಳೆ ನಿಂತರೂ ಜನರ ಪರದಾಟ ಮಾತ್ರ ನಿಂತಿರಲಿಲ್ಲ. ಮನೆ, ಮಳಿಗೆ, ಅಂಗಡಿಗಳಿಂದ ಕೊಳಚೆ ನೀರು ಹೊರಗೆ ಹಾಕುವ ಕೆಲಸ ರಾತ್ರಿವರೆಗೂ ನಡೆದಿತ್ತು.

ಹುಬ್ಬಳ್ಳಿಯ ನ್ಯೂ ಕಾಟನ್ ಮಾರ್ಕೆಟ್ನಲ್ಲಿರುವ ಶ್ರೀಚಿತ್ರಲಿಂಗೇಶ್ವರ, ಮಾರುತಿ ದೇವಸ್ಥಾನಕ್ಕೆ ನೀರು ನುಗ್ಗಿದ್ದರಿಂದ ಶಿವನ ಮೂರ್ತಿ ಮುಳುಗಿತ್ತು.

ಎಲ್ಲಿದೆ ಸ್ಮಾರ್ಟಸಿಟಿ?: ಸ್ಮಾರ್ಟ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗಿರುವ ಹುಬ್ಬಳ್ಳಿ ಧಾರವಾಡದಲ್ಲಿ ಒಂದೇ ಮಳೆಗೆ ಎಲ್ಲೆಂದರಲ್ಲಿ ನೀರು ನಿಂತು ಜನರು ತೊಂದರೆ ಪಡುವಂತಾಗಿದೆ. ಸ್ಮಾರ್ಟ ಸಿಟಿ ಅಭಿವೃದ್ಧಿ ಎಂದರೆ ಇದೇನಾ? ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿತ್ತು.

ಹುಧಾ ರಸ್ತೆ ಬಂದ್: ಅತಿಯಾದ ಮಳೆಗೆ ಹುಬ್ಬಳ್ಳಿ ಧಾರವಾಡ ಮಧ್ಯದ ಬಿಆರ್ಟಿಎಸ್ ಮಾರ್ಗವೂ ಕೆಲಹೊತ್ತು ಬಂದ್ ಆಗಿತ್ತು. ವಿದ್ಯಾನಗರ ಕಾಡಸಿದ್ದೇಶ್ವರ ಕಾಲೇಜು, ಉಣಕಲ್ಲ ಕ್ರಾಸ್, ಶ್ರೀನಗರ ಕ್ರಾಸ್ನಲ್ಲಿ ಜಂಕ್ಶನ್ಗಳು ಜಲಾವೃತವಾಗಿದ್ದವು. ಇದರಿಂದ ತಾಸಿಗೂ ಹೆಚ್ಚು ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಮಳೆ ನಿಂತ ನಂತರವೂ ವಾಹನ ಸವಾರರು ಪರದಾಡಿದರು.

ಅಪಾರ್ಟಮೆಂಟ್ಗಳಿಗೂ ನೀರು:
ಇಲ್ಲಿಯ ವಿದ್ಯಾನಗರ ಹಾಗೂ ಅಕ್ಕಪಕ್ಕದ ಪ್ರದೇಶದಲ್ಲಿ ಕೆಲವು ಅಪಾರ್ಟಮೆಂಟ್ಗಳಿಗೆ ಮಳೆ ನೀರು ನುಗ್ಗಿತ್ತು. ಅಪಾರ್ಟಮೆಂಟ್ನ ಕೆಳಭಾಗದಲ್ಲಿ ನೀರು ಸಂಗ್ರಹವಾಗಿದ್ದರಿಂದ ಮನೆಗಳಿಗೆ ಹೋಗುವುದಕ್ಕೂ ತೊಂದರೆಯಾಗಿತ್ತು.

ಧರೆಗುರುಳಿದ ಮರ, ಟೊಂಗೆಗಳು:
ಗುಡುಗು, ಸಿಡಿಲು ಹಾಗೂ ಭಾರಿ ಗಾಳಿಯಿಂದಾಗಿ ಅನೇಕ ಕಡೆಗಳಲ್ಲಿ ಮರಗಳು ಧರೆಗುರುಳಿವೆ. ರಸ್ತೆ ಪಕ್ಕದ ಅನೇಕ ಗಿಡಗಳ ಟೊಂಗೆಗಳು ಮುರಿದು ಬಿದ್ದಿದ್ದವು. ಲಿಂಗರಾಜನಗರದಲ್ಲಿ ಮರವೊಂದು ಬುಡಸಮೇತ ಉರುಳಿ ಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net