ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಸಿದ್ಧಾರೂಢರ ಹೆಸರು

Siddaruda swami 23
Published on

ಹುಬ್ಬಳ್ಳಿ: ಹುಬ್ಬಳ್ಳಿ ರೈಲ್ವೆ ನಿಲ್ದಾಣ ಇನ್ನು ಮುಂದೆ ‘ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ-ಹುಬ್ಬಳ್ಳಿ’ ಎಂದು ಮರುನಾಮಕರಣಗೊಳ್ಳಲಿದೆ.

ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢರ ಹೆಸರು ಇಡಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಕೇಳಿಬರುತ್ತಿತ್ತು. ಈ ಕುರಿತಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆಯನ್ನೂ ಕಳುಹಿಸಿತ್ತು. ಇದೀಗ ಕೇಂದ್ರ ಸರ್ಕಾರದಿಂದ ಉತ್ತರ ಬಂದಿದೆ. ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ, ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಹೆಸರನ್ನು ‘ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ-ಹುಬ್ಬಳ್ಳಿ’ ಎಂದು ಬದಲಾಯಿಸಲು ಯಾವುದೇ ಆಕ್ಷೇಪ ಇಲ್ಲ ಎಂದು ತಿಳಿಸಿದೆ. ಈ ಕುರಿತು ಮಾಹಿತಿ ನೀಡಿರುವ ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಡಿಜಿಎಂ ಇ. ವಿಜಯಾ, ಇನ್ನೂ ಎರಡ್ಮೂರು ದಿನಗಳಲ್ಲಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಹೆಸರನ್ನು ಬದಲಾಯಿಸಲಾಗುವುದು ಎಂದು ತಿಳಿಸಿದ್ದಾರೆ. ರೈಲ್ವೆ ಸಚಿವ ಪಿಯೂಷ ಗೋಯಲ್ ಅವರು ಈ ಕುರಿತು ಟ್ವೀಟ್ ಮಾಡಿದ್ದು, ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢರ ನಾಮಕರಣವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಶ್ರೀ ಸಿದ್ಧಾರೂಢ ಸ್ವಾಮಿ ಮಠದ ಟ್ರಸ್ಟ್ ಕಮಿಟಿಯವರು ರೈಲ್ವೆ ನಿಲ್ದಾಣ ಮತ್ತು ವಿಮಾನ ನಿಲ್ದಾಣಕ್ಕೆ, ಹುಬ್ಬಳ್ಳಿಯಲ್ಲಿ ನೆಲೆನಿಂತು ಅಪಾರ ಭಕ್ತರನ್ನು ಪೊರೆಯುತ್ತಿರುವ ಅದ್ವೈತ ಸಾಮ್ರಾಟನೆನಿಸಿರುವ ಸಂತನ ಹೆಸರಿಡುವಂತೆ ಅನೇಕ ವರ್ಷಗಳಿಂದ ಮನವಿ ಸಲ್ಲಿಸುತ್ತಲೇ ಬಂದಿತ್ತು. ಕಮಿಟಿ ಕೋರಿಕೆಯಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರೂ ಪ್ರಯತ್ನ ನಡೆಸಿದ್ದರು.

ಜೋಶಿ ಕೃತಜ್ಞತೆ: ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣ ಎಂದು ಮರುನಾಮಕರಣ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಪಿಯೂಷ ಗೋಯಲ್ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೃತಜ್ಞತೆ ಸಲ್ಲಿಸಿದ್ದಾರೆ. ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ ಅಂಗಡಿ ಅವರ ಪಾತ್ರವನ್ನೂ ಜೋಶಿ ಇದೇ ವೇಳೆ ಸ್ಮರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net