

ಹುಬ್ಬಳ್ಳಿ : ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತೀಯ ರೈಲ್ವೆಯ ಎಲ್ಲ 70 ವಿಭಾಗಗಳ ಪೈಕಿ ಸರಕು ಲೋಂಡಿಂಗ್ ಸುಧಾರಣೆಯಲ್ಲಿ ಮೊದಲ ಸ್ಥಾನ ಪಡೆದು, ಮಹತ್ತರ ಸಾಧನೆ ಮಾಡಿದೆ.
ರೈಲ್ವೆ ಬೋರ್ಡ್ನ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಹುಬ್ಬಳ್ಳಿ ವಿಭಾಗವು ಈ ವರ್ಷ 20.78 ಮಿಲಿಯನ್ ಟನ್ ಸರಕುಗಳನ್ನು ಲೋಡ್ ಮಾಡಿದ್ದು, ಹಿಂದಿನ ವರ್ಷ ಲೋಡ್ ಮಾಡಿದ್ದ 16.42 ಮಿಲಿಯನ್ ಟನ್ ಗೆ ಹೋಲಿಸಿದರೆ 4.36 ಮಿಲಿಯನ್ ಟನ್ (ಶೇ. 26.57) ವೃದ್ಧಿಯನ್ನು ಸಾಧಿಸಿದೆ.
ವರ್ಷಕ್ಕೆ 10 ಮಿಲಿಯನ್ ಟನ್ಗಿಂತ ಹೆಚ್ಚು ಸರಕುಗಳನ್ನು ನಿರ್ವಹಿಸುವ ಎಲ್ಲ ವಿಭಾಗಗಳ ಪೈಕಿ ಇದು ಅತ್ಯಧಿಕ ಸುಧಾರಣೆ ದಾಖಲಿಸಿದ ವಿಭಾಗವಾಗಿದೆ. ಈ ಸಾಧನೆ ಮೂಲಸೌಕರ್ಯ ವೃದ್ಧಿ, ಸರಕು ಬೋಗಿಗಳ ಸಮರ್ಪಕ ಅನುಷ್ಠಾನ, ಟರ್ವಿುನಲ್ ಹ್ಯಾಂಡ್ಲಿಂಗ್ ಸುಧಾರಣೆ ಹಾಗೂ ವೇಗವಾದ ರೇಕ್ ಟರ್ನ್ ಅರೌಂಡ್ ಖಾತ್ರಿಪಡಿಸುವಲ್ಲಿ ರೈಲ್ವೆಯ ಪ್ರಯತ್ನಗಳನ್ನು ತೋರಿಸುತ್ತದೆ.
ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಥೂರ್ ಅವರ ಮಾರ್ಗದರ್ಶನದಲ್ಲಿ, ಹೊಸ ಸೈಡಿಂಗ್ಗಳ ಅನುಸ್ಥಾಪನೆ, ಗ್ರಾಹಕ ಸ್ನೇಹಿ ನೀತಿಗಳಿಗೆ ಮನ್ನಣೆ ಮತ್ತು ಸರಕು ಗ್ರಾಹಕರೊಂದಿಗೆ ಸಮನ್ವಯದ ಮೂಲಕ ಸರಕು ಕಾರ್ಯುಚರಣೆಯಲ್ಲಿ ಸುಧಾರಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಹುಬ್ಬಳ್ಳಿ ರೈಲ್ವೆ ವಿಭಾಗದ ವಿಭಾಗೀಯ ವ್ಯವಸ್ಥಾಪಕಿ ಬೇಲಾ ಮೀನಾ ನೇತೃತ್ವದಲ್ಲಿ ವಿಭಾಗವು ಗ್ರಾಹಕರ ಅನುಭವವನ್ನು ಸುಧಾರಿಸಲು ಮತ್ತು ಕೈಗಾರಿಕೆಗಳಿಗೆ ನವೀನ ಕ್ರಮಗಳನ್ನು ತೆಗೆದುಕೊಂಡಿದೆ.
ವಿಭಾಗವು ಕಲ್ಲಿದ್ದಲು, ಕಬ್ಬಿಣ, ಉಕ್ಕು, ಸಿಮೆಂಟ್, ಧಾನ್ಯಗಳು ಮತ್ತು ರಸಗೊಬ್ಬರಗಳು ಸೇರಿದಂತೆ ವಿವಿಧ ವಾಣಿಜ್ಯ ಸರಕುಗಳ ಲೋಡಿಂಗ್ನಲ್ಲಿ ಗಣನೀಯ ವೈವಿಧ್ಯತೆ ಸಾಧಿಸಿದೆ.