

ಹುಬ್ಬಳ್ಳಿ : ಬಹು ನಿರೀಕ್ಷೆಯ ಹುಬ್ಬಳ್ಳಿ-ಪುಣೆ ಮಧ್ಯೆ ವಂದೇ ಭಾರತ್ ರೈಲಿನ ಸೇವೆ ಇನ್ನು ಕೆಲವೇ ದಿನಗಳಲ್ಲಿ ವಿದ್ಯುಕ್ತವಾಗಿ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ, ಈ ಕುರಿತು ರ್ಚಚಿಸಿದ್ದಾಗಿ ಪ್ರಲ್ಹಾದ ಜೋಶಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ರೈಲು ಸೇವೆಯ ಆರಂಭಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳು ಪೂರ್ಣಗೊಳ್ಳುತ್ತಲಿದ್ದು, ಶೀಘ್ರದಲ್ಲೇ ವಂದೇ ಭಾರತ್ ರೈಲಿನ ಚಾಲನೆಗೆ ಹಸಿರು ನಿಶಾನೆ ಸಿಗಲಿದೆ ಎಂದು ಜೋಶಿ ತಿಳಿಸಿದ್ದಾರೆ.
ಈ ವಿಷಯವಾಗಿ ಕಳೆದ ಎರಡು ತಿಂಗಳ ಹಿಂದೆಯೇ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು, ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಪುಣೆಗೆ ವಂದೆ ಭಾರತ್ ರೈಲು ಸೇವೆ ಆರಂಭಿಸುವಂತೆ ಮನವಿ ಮಾಡಿದ್ದೆ. ಮನವಿಗೆ ಸ್ಪಂಧಿಸಿರುವ ರೈಲ್ವೆ ಸಚಿವರು, ಶೀಘ್ರದಲ್ಲೇ ಈ ರೈಲು ಸೇವೆ ಆರಂಭಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.
ಈ ರೈಲು ಸೇವೆಯಿಂದ ಹುಬ್ಬಳ್ಳಿ, ಬೆಳಗಾವಿ ಸೇರಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಪುಣೆಗೆ ಸಂಚಾರ ನಡೆಸುವ ಜನರಿಗೆ ಸಹಾಯವಾಗಲಿದೆ. ನಿತ್ಯ ನೂರಾರು ಜನರು ಉಭಯ ರಾಜ್ಯಗಳ ಎರಡು ಪ್ರಮುಖ ನಗರಗಳ ನಡುವೆ ಸಂಚಾರ ನಡೆಸಲು ಈ ರೈಲಿನಿಂದ ಅನುಕೂಲವಾಗಲಿದೆ. ಪುಣೆಯಿಂದ ಮುಂಬೈಗೆ ಮುಂದುವರೆದ ಪ್ರಯಾಣಕ್ಕೂ ಸಹ ಇದರಿಂದ ಅನುಕೂಲವಾಗಲಿದೆ ಎಂದಿದ್ದಾರೆ.
ಕರ್ನಾಟಕದ ವಾಣಿಜ್ಯ ವಹಿವಾಟಿನ ಪ್ರಮುಖ ಕೇಂದ್ರವಾದ ಹುಬ್ಬಳ್ಳಿ ಮತ್ತು ಪುಣೆಯನ್ನು ಈ ರೈಲು ಸಂರ್ಪಸಲಿದೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೀರಜ್, ಸಾಂಗ್ಲಿ, ಸತಾರಾ, ಪುಣೆಯಲ್ಲಿ ಹುಬ್ಬಳ್ಳಿ-ಪುಣೆ ನಡುವಿನ ವಂದೇ ಭಾರತ್ ರೈಲು ನಿಲುಗಡೆಯನ್ನು ಹೊಂದಿದೆ. ವಾರದ ಎಲ್ಲ ದಿನ ಈ ರೈಲು ಸಂಚಾರವನ್ನು ನಡೆಸಲು ಕೋರಿದ್ದಾಗಿ ಸಚಿವ ಜೋಶಿ ತಿಳಿಸಿದ್ದಾರೆ.