

ಹುಬ್ಬಳ್ಳಿ: ಇಲ್ಲಿನ ಅಕ್ಷಯ ಕಾಲನಿಯ ಮನೆಯೊಂದರಲ್ಲಿ ಶುಕ್ರವಾರ ರಾತ್ರಿ ಇಸ್ಪೀಟ್ ಜೂಜಾಟವಾಡಿದ್ದ ಪ್ರಕರಣದ ಆರೋಪಿಗಳಾದ ನಾಲ್ವರು ಪೊಲೀಸ್ ಅಧಿಕಾರಿ- ಸಿಬ್ಬಂದಿ ಅಮಾನತುಗೊಂಡಿದ್ದಾರೆ.
ಹು-ಧಾ ಸಿಎಆರ್ ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್ (ಆರ್ಪಿಐ) ಸಂತೋಷ ಬೋಜಪ್ಪಗೋಳ, ಸಿಎಆರ್ ಹೆಡ್ ಕಾನ್ಸ್ಟೆಬಲ್ಗಳಾದ ಮುತ್ತಪ್ಪ ಕಾಟನಾಯಕ, ನವೀನ ತೋಪಲಕಟ್ಟಿ, ಪೂರ್ವ ಸಂಚಾರ ಠಾಣೆಯ ಕಾನ್ಸ್ಟೆಬಲ್ ಬಸವಣ್ಯಪ್ಪ ಬಾವಿಹಾಳ ಹಾಗೂ ಸಿಎಆರ್ನ ನಿವೃತ್ತ ಹೆಡ್ ಕಾನ್ಸ್ಟೆಬಲ್ ಶ್ರೀಕಾಂತ ಗೋಂದಕರ ಅಮಾನತುಗೊಂಡವರು.
ಅಕ್ಷಯ ಕಾಲನಿಯ ಎರಡನೇ ಹಂತದ 337 ಸಂಖ್ಯೆಯ ಬಾಡಿಗೆ ಮನೆಯಲ್ಲಿ ಪೊಲೀಸ್ ಅಧಿಕಾರಿ- ಸಿಬ್ಬಂದಿಯೇ ಎಕ್ಕ- ರಾಜ- ರಾಣಿ ಆಟವಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸ್ ಆಯುಕ್ತರ ಸೂಚನೆಯಂತೆ ಗೋಕುಲ ರೋಡ್ ಠಾಣೆ ಇನ್ಸ್‌ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ
ನೇತೃತ್ವದ ತಂಡ ದಾಳಿ ನಡೆಸಿತ್ತು. ಐವರ ವಿರುದ್ಧ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕುರಿತು "ವಿಜಯವಾಣಿ' ಹಾಗೂ "ದಿಗ್ವಿಜಯ' ವಾಹಿನಿ ವಿವರವಾದ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ನಾಲ್ವರು ಪೊಲೀಸ್ ಅಧಿಕಾರಿ- ಸಿಬ್ಬಂದಿಯನ್ನು ಅಮಾನತು ಮಾಡಿ ಪೊಲೀಸ್ ಆಯುಕ್ತ ಲಾಭೂರಾಮ ಆದೇಶಿಸಿದ್ದಾರೆ. ಈ ಮೂಲಕ ಕಾನೂನು ಉಲ್ಲಂಘಿಸುವವರು ಯಾರೇ ಆಗಿದ್ದರೂ ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.