

ವಾರಾಣಸಿ: ವಾರಾಣಸಿ ಲೋಕಸಭಾ ಚುನಾವಣಾ ಪ್ರಚಾರರ್ಥವಾಗಿ ಕ್ಷೇತ್ರ ವ್ಯಾಪ್ತಿಯ ಸೇವಾಪುರಿ ವಿಧಾನಸಭಾ ಕ್ಷೇತ್ರದ ಸಂಸದರ ಆದರ್ಶ ಗ್ರಾಮವಾದ ಜಯಾಪುರದ ಅಟಲ್ ನಗರಕ್ಕೆ ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಇತ್ತೀಚೆಗೆ ಭೇಟಿ ನೀಡಿದರು. ಅಲ್ಲಿನ ಮತದಾರರೊಂದಿಗೆ ಪ್ರಚಾರ ಸಭೆ ನಡೆಸಿದರು.
ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ದತ್ತುಪಡೆದ ಜಯಾಪುರ ಗ್ರಾಮದಲ್ಲಿ ಆಗಿರುವ ಬದಲಾವಣೆ ಕುರಿತು ಜನರಿಂದ ಮಾಹಿತಿ ಪಡೆದರು. ಮೊದಲ ಬಾರಿಗೆ ಬ್ಯಾಂಕ್, ಅಟಲ್ ನಗರ, ಅಂಚೆ ಕಚೇರಿ, ಸೋಲಾರ್ ಪವರ್ ಪ್ಲಾಂಟ್, ಆಯುಷ್ಮಾನ್ ಆರೋಗ್ಯ ಕೇಂದ್ರ, ಪಿಂಚ್ ರಸ್ತೆಗಳು, ಮನೆ ಮನೆಗೆ ಶೌಚಾಗೃಹ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳು ಮೋದಿ ಅವರ ಕಾರ್ಯವೈಖರಿ ಬಗ್ಗೆ ತಿಳಿಸಿದರು.
‘ಇದು ಸಂಸದರ ಆದರ್ಶ ಗ್ರಾಮವಾಗಿದೆ. ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಮೋದಿ ಅವರ ಕೊಡುಗೆಗಳ ಕುರಿತು ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮೂರನೇ ಬಾರಿಗೆ ಮೋದಿ ಅವರನ್ನು ಪ್ರಧಾನ ಮಂತ್ರಿ ಮಾಡಲು ಮತದಾರರು ತೀರ್ಮಾನಿಸಿದ್ದಾರೆ’ ಎಂದು ಶಾಸಕ ಟೆಂಗಿನಕಾಯಿ ತಿಳಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಶ್ರೀರಾಮ್ ನರೇಶ ಶರ್ಮಾ, ಪ್ರಮುಖರಾದ ಲಾಲ್‌ಚೆಂದ್ ಪಟೇಲ್, ರಾಮರಾಜ್ ಹರಿಜನ್, ಸುರೇಂದ್ರ ಪ್ರಸಾದ ಸಿಂಗ್, ತಿರಲೋಕಿ ಸಿಂಗ್, ರಾಹುಲ್, ಇನ್ನಾರಮನ್ ಪಟೇಲ್ ಇತರರು ಇದ್ದರು.