ಕ್ರೈಸ್ತ ಧರ್ಮದ ಪುಸ್ತಕ ಹಂಚುತ್ತಿದ್ದವರು ಪೊಲೀಸ್​ ವಶಕ್ಕೆ

Christ
Published on

ಹುಬ್ಬಳ್ಳಿ: ಕಿಮ್ಸ್​ ಆಸ್ಪತ್ರೆ ಆವರಣದಲ್ಲಿ ರೋಗಿಗಳಿಗೆ ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ಸಾಹಿತ್ಯ ಹಂಚುತ್ತಿದ್ದ ದಂಪತಿ ಸೇರಿ ಮೂವರನ್ನು ಬಜರಂಗದಳದ ಮಾಹಿತಿ ಆಧಾರದ ಮೇಲೆ ವಿದ್ಯಾನಗರ ಠಾಣೆ ಪೊಲೀಸರು ಗುರುವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಇಬ್ಬರು ಮಹಿಳೆಯರು ಹಾಗೂ ಒಬ್ಬ ವ್ಯಕ್ತಿ ಕ್ರೈಸ್ತ ಧರ್ಮ ಪ್ರಚಾರ ಮಾಡುವ, ಯೇಸು ಕ್ರಿಸ್ತನ ಸಂದೇಶ ಹೊಂದಿದ್ದ ಕರಪತ್ರ, ಪುಸ್ತಕಗಳನ್ನು ರೋಗಿಗಳಿಗೆ ಹಂಚುತ್ತಿದ್ದರು. ಇದನ್ನು ಗಮನಿಸಿದ ಬಜರಂಗದಳದ ಕಾರ್ಯಕರ್ತರಾದ ವಿಜಯ ಸಾಗರ, ಯಲ್ಲಪ್ಪ ವಿದ್ಯಾನಗರ ಠಾಣೆಗೆ ಮಾಹಿತಿ ನೀಡಿದ್ದರು. ಕೂಡಲೇ ಜಾಗೃತರಾದ ಇನ್​ಸ್ಪೆಕ್ಟರ್​ ಸಂತೋಷ ಪವಾರ ಹಾಗೂ ಸಿಬ್ಬಂದಿ ಮೂವರನ್ನು ಠಾಣೆಗೆ ಕರೆದೊಯ್ದು ವಿಚಾರಿಸಿದರು.
ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಜರಂಗದಳದ ವಿಭಾಗ ಸಂಚಾಲಕ ಶಿವಾನಂದ ಸತ್ತಿಗೇರಿ ವಿದ್ಯಾನಗರ ಠಾಣೆಯಲ್ಲಿ ದೂರು ನೀಡಿದರು. ಆರೋಪಿತರ ವಿರುದ್ಧ ಮುಂಜಾಗ್ರತಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net