

ಹುಬ್ಬಳ್ಳಿ: ಕರ್ನಾಟಕದಲ್ಲಿ ವ್ಯವಹಾರಿಕ ಭಾಷೆ ಕನ್ನಡವೇ ಆಗಿರಬೇಕು. ನಾಮ ಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಇರಬೇಕು ಎಂದು ಸರ್ಕಾರ ಮಾಡಿರುವ ಮಸೂದೆ ವಾಪಸ್ ಪಡೆದು ಸಂರ್ಪೂಣ ಕನ್ನಡದಲ್ಲೇ ಫಲಕ ಇರುವಂತೆ ಆದೇಶ ಮಾಡಬೇಕು ಎಂದು ಹಿರಿಯ ಸಾಹಿತಿ, ಪತ್ರಕರ್ತ ಸರಜೂ ಕಾಟ್ಕರ್ ಆಗ್ರಹಿಸಿದರು.
ಇಲ್ಲಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಶಹರ ತಾಲೂಕು 9ನೇ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಗಡಿ ಭಾಗದಲ್ಲಿ ಕನ್ನಡ ಶಾಲೆಗಳು ಬಲಿಷ್ಠಗೊಳಿಸಬೇಕು. ಸಮ್ಮೇಳನಗಳಲ್ಲಿ ಅತ್ಯಂತ ಕಡಿಮೆ ನಿರ್ಣಯಗಳನ್ನು ಕೈಗೊಂಡು ಅವು ಜಾರಿ ಆಗುವವರೆಗೂ ಬಿಡಬಾರದು. ಆಯಾ ಸಮ್ಮೇಳನಾಧ್ಯಕ್ಷರನ್ನು ವರ್ಷವಿಡಿ ಕನ್ನಡದ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ, ತಾಲೂಕು ಸಾಹಿತ್ಯ ಸಮ್ಮೇಳನಗಳಿಗಾಗಿ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ಮೀಸಲಿಡಬೇಕು. ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ 5 ಲಕ್ಷ, ತಾಲೂಕು ಸಮ್ಮೇಳನಕ್ಕೆ 2 ಲಕ್ಷ ಒದಗಿಸಬೇಕು ಎಂದು ಆಗ್ರಹಿಸಿದರು.
ಕನ್ನಡದಲ್ಲಿದೆ ಪ್ರಾಣ ಶಕ್ತಿ:
ಸಮ್ಮೇಳನ ಸರ್ವಾಧ್ಯಕ್ಷ ವೆಂಕಟೇಶ ಮರೇಗುದ್ದಿ ಮಾತನಾಡಿ, ಕನ್ನಡದಲ್ಲಿ ಪ್ರಾಣ ಶಕ್ತಿ ಇದೆ. ಇದನ್ನು ಆಡುತ್ತಿದ್ದರೆ ಮನಸ್ಸು ಹೂ ಅರಳಿದಂತಾಗುತ್ತದೆ. ಇಂತಹ ಭಾಷೆಯನ್ನು ಉಳಿಸುವ ಕೆಲಸ ಪ್ರತಿ ಮನೆಯಿಂದಲೇ ಆಗಬೇಕೆ ಹೊರತು ಸರ್ಕಾರದಿಂದ ಇದು ಆಗುವುಂಥದ್ದಲ್ಲ ಎಂದು ಹೇಳಿದರು.
ಕನ್ನಡವನ್ನು ಕಟ್ಟಬೇಕಾದರೆ ಕನ್ನಡ ಗೀತೆ ಕೇಳಬೇಕು, ಪುಸ್ತಕ ಓದಬೇಕು, ವಿಶೇಷವಾಗಿ ಕನ್ನಡ ಪತ್ರಿಕೆ, ನಿಯತಕಾಲಿಕೆಗಳನ್ನು ವಾಚನ ಮಾಡಬೇಕು. ಶತಮಾನಗಳ ಹಿಂದೆ ಕನ್ನಡಿಗರ ಸಾಮ್ರಾಜ್ಯ ಉತ್ತರ ಭಾರತದವರೆಗೂ ಹರಡಿತ್ತು. ಅದನ್ನು ಕಳೆದುಕೊಳ್ಳುತ್ತ ಬಂದಿದ್ದೇವೆ. ಇನ್ನೂ ಜಾಗೃತರಾಗದಿದ್ದರೆ ಇನ್ನಷ್ಟು ಕಳೆದುಕೊಳ್ಳುವ ಅಪಾಯವಿದೆ ಎಂದು ಎಚ್ಚರಿಸಿದರು.
ಮೇಯರ್ ವೀಣಾ ಬರದ್ವಾಡ ಮಾತನಾಡಿ, ಇತರ ಭಾಷೆಗಳ ಸುಳಿಗೆ ಸಿಲುಕಿ ಮರೆತು ಹೋಗುತ್ತಿರುವ ಕನ್ನಡವನ್ನು ಎಲ್ಲರೂ ಆಚರಣೆಯಲ್ಲಿ ತರುವ ಮೂಲಕ ಉಳಿಸುವ ಕೆಲಸ ಆಗಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಕೇಂದ್ರ ಕಸಾಪದಿಂದ ಸಮ್ಮೇಳನಗಳಿಗೆ ಅನುದಾನ ಲಭ್ಯವಾಗುತ್ತಿಲ್ಲ. ಆದಾಗ್ಯೂ ಯಾರಲ್ಲೂ ಹಣ ಸಂಗ್ರಹಣೆ ಮಾಡಿಲ್ಲ. ಮಹಾನಗರ ಪಾಲಿಕೆ, ಇತರ ದಾನಿಗಳ ನೆರವಿನಿಂದ ಸಮ್ಮೇಳನ ನಡೆಸಲಾಗುತ್ತಿದೆ ಎಂದರು.
ಆಶಯ ನುಡಿಗಳನ್ನಾಡಿದ ಪ್ರೊ. ಕೆ.ಎಸ್. ಕೌಜಲಗಿ, ಹುಬ್ಬಳ್ಳಿ ವಾಣಿಜ್ಯ ನಗರಿ ಮಾತ್ರವಲ್ಲ, ಸಾಹಿತಿಗಳ ಬೀಡಾಗಿದೆ. ಹಲವು ಆಧುನಿಕ ಸೌಲಭ್ಯಗಳಿಂದ ಕಂಗೊಳಿಸುತ್ತಿದೆ. ಕರ್ನಾಟಕ ಏಕೀಕರಣಕ್ಕೆ ಸಹಿ ಮಾಡಿದ್ದು ಇಲ್ಲಿಯೇ ಎಂದು ಹುಬ್ಬಳ್ಳಿಯ ವಿಶೇಷತೆಗಳನ್ನು ಪಟ್ಟಿ ಮಾಡಿದರು.
ನಿಕಟಪೂರ್ವ ಸಮ್ಮೇಳನದ ಅಧ್ಯಕ್ಷ ಸಿ.ಬಿ. ಮರಿಗೌಡ್ರ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ವಿರೂಪಾಕ್ಷ ಕಟ್ಟಿಮನಿ ಸ್ವಾಗತಿಸಿದರು. ಡಾ. ಬಿ.ಎಸ್. ಮಾಳವಾಡ ಕಾರ್ಯಕ್ರಮ ನಿರೂಪಿಸಿದರು. ಆರ್.ಎಂ. ಗೋಗೇರಿ ವಂದಿಸಿದರು.
ಮಾಜಿ ಸಿಎಂ ಜಗದೀಶ ಶೆಟ್ಟರ್, ಬಿ.ಎ. ಪಾಟೀಲ, ಡಾ. ಶರಣಪ್ಪ ಕೊಟಗಿ, ಎಸ್.ಕೆ. ಆದಪ್ಪನವರ, ಶೇಖರಯ್ಯ ಮಠಪತಿ, ಚನ್ನಬಸಪ್ಪ ಧಾರವಾಡಶೆಟ್ಟರ್, ಇತರರು ಇದ್ದರು.
ನನ್ನ ಕನಸಿನ ಹುಬ್ಬಳ್ಳಿ
ನನ್ನ ಕನಸಿನ ಹುಬ್ಬಳ್ಳಿ ಕುರಿತು ಏರ್ಪಡಿಸಿದ್ದ ಗೋಷ್ಠಿಯಲ್ಲಿ ಡಾ. ಎಚ್.ವಿ. ಬೆಳಗಲಿ ಮಾತನಾಡಿ, ಪ್ರಾಚಿನ ಕಾಲದಲ್ಲಿ ರ್ಪೂಬಳ್ಳಿ, ಪುರಬಳ್ಳಿ ಅಥವಾ ಎಲೆಯ ಪೂರ್ವದ ಹುಬ್ಬಳ್ಳಿ ಹಾಗೂ ರಾಯರ ಹುಬ್ಬಳ್ಳಿ ಎಂಬ ಹೆಸರಿನಿಂದ ಕರೆಯಲ್ಪಟ್ಟಿದೆ ಎಂದು ಇತಿಹಾಸ ಬಿಚ್ಚಿಟ್ಟರು. ಪ್ರಸ್ತುತ ಹುಬ್ಬಳ್ಳಿ ಹೇಗೆ ಅಭಿವೃದ್ಧಿಯಾಗಿದೆ ಎಂದು ವಿವರಿಸಿದರು.
ಹುಬ್ಬಳ್ಳಿ ಮಹಿಳಾ ಸಾಹಿತಿಗಳ ಕುರಿತು ಮಾತನಾಡಿದ ಡಾ. ಸರ್ವಮಂಗಳಾ ಆಚಾರ್ಯ, ಸಾಹಿತ್ಯವು ಮನುಷ್ಯನನ್ನು ಬದುಕಿಸುತ್ತದೆ, ಕ್ರಿಯಾಶೀಲಗೊಳಿಸುತ್ತದೆ. ಹಲವು ಸಾಮಾಜಿಕ ರೋಗಗಳಿಗೆ ದಿವ್ಯ ಔಷಧಿ ಇದಾಗಿದೆ. ಇಂತಹ ಸಾಹಿತ್ಯ ಕ್ಷೇತ್ರಕ್ಕೆ ಇಲ್ಲಿನ ಅನೇಕ ಮಹಿಳೆಯರು ಕೊಡುಗೆ ನೀಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಮೋಹನ ಹೆಗಡೆ ಮಾತನಾಡಿ, ಹುಬ್ಬಳ್ಳಿಗೆ ಏನು ಕಡಿಮೆಯಾಗಿದೆ? ಹೆಂಗ್ ಇದೆಯೋ ಹಂಗೇ ಇದೆ ಎಂದು ವಿಡಂಬಣಾತ್ಮಕ ಚಿತ್ರಣ ಬಿಡಿಸಿಟ್ಟರು. ದೂರಾಲೋಚನೆ, ಚಿಂತನೆ ಇರುವ ವ್ಯಕ್ತಿಗಳಿಂದ ಹುಬ್ಬಳ್ಳಿ ಅಂದಗೊಳ್ಳಲು ಸಾಧ್ಯ ಎಂದರು.
ಕನಕದಾಸ ಶಿಕ್ಷಣ ಸಮಿತಿ ಉಪಾಧ್ಯಕ್ಷ ಡಾ. ಶಾಂತಣ್ಣ ಕಡಿವಾಲ, ಪ್ರಾಚಾರ್ಯ ಪ್ರೊ. ಸಂದೀಪ ಬೂದಿಹಾಳ, ಇತರರು ಇದ್ದರು.
ಅಶೋಕ ಸನ್ನಿ ನಿರೂಪಿಸಿದರು. ಸಂಧ್ಯಾ ದಿತ ಸ್ವಾಗತಿಸಿದರು. ಸುರೇಶ ಹೊರಕೇರಿ ವಂದಿಸಿದರು.