

ಹುಬ್ಬಳ್ಳಿ: ನಾಡಿನ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವ ಸಲುವಾಗಿ ಆರಂಭವಾಗಿರುವ ಹುಬ್ಬಳ್ಳಿ ಜಗ್ಗಲಗಿ ಹಬ್ಬ ಭಾನುವಾರ ಸಂಭ್ರಮ, ಸಡಗರದಿಂದ ನಡೆಯಿತು.
ನಗರದ ಮೂರುಸಾವಿರ ಮಠದ ಮೈದಾನದಿಂದ ಮೆರವಣಿಗೆ ನಡೆಸಿದ ವಿವಿಧ ಚರ್ಮವಾದ್ಯ ಮೇಳಗಳು ಮಠದ ಮುಂದಿನ ರಸ್ತೆ, ದಾಜಿಬಾನಪೇಟ, ತುಳಜಾಭವಾನಿ ದೇವಸ್ಥಾನ ವೃತ್ತ, ಮೇದಾರ ಓಣಿ, ಶಿವಾಜಿ ಚೌಕ್, ಬ್ರಾಡ್ವೇ, ದುರ್ಗದಬೈಲ್, ರಾಧಾಕೃಷ್ಣ ಗಲ್ಲಿ, ಬಾರದಾನ ಸಾಲ, ಜವಳಿ ಸಾಲ, ಬೆಳಗಾವಿ ಗಲ್ಲಿ, ಪೆಂಡಾರ ಗಲ್ಲಿ ಸೇರಿ ವಿವಿಧ ಕಡೆಗಳಲ್ಲಿ ಸಂಚರಿಸಿ ವಾಪಸ್ ಮೂರುಸಾವಿರ ಮಠ ತಲುಪಿದವು.
ಮೆರವಣಿಗೆಯಲ್ಲಿ ಜಗ್ಗಲಗಿ ತಂಡ, ಡೊಳ್ಳು, ವಿವಿಧ ಗೊಂಬೆ ಆಟದ ತಂಡದವರು, ಕೋಲಾಟ, ಮಹಿಳೆಯರ ಜಗ್ಗಲಗಿ, ಡೊಳ್ಳಿನ ತಂಡಗಳು ಭಾಗವಹಿಸಿದ್ದವು. ಹುಬ್ಬಳ್ಳಿ ತಾಲೂಕಿನ ಸುಳ್ಳ, ಬ್ಯಾಹಟ್ಟಿ, ಅಮರಗೋಳ, ಛಬ್ಬಿ, ಅರಳಿಕಟ್ಟಿ, ಬಮ್ಮಸಮುದ್ರ, ಕುಸುಗಲ್ಲ, ಧಾರವಾಡದ ಶಿವಳ್ಳಿ, ಕಣವಿಹೊನ್ನಾಪುರ, ಮರೆವಾಡ, ಕಲಘಟಗಿ ತಾಲೂಕಿನ ಸುರಶೆಟ್ಟಿಕೊಪ್ಪ, ಖಾನಾಪುರ ತಾಲೂಕಿನ ಗುಂಡೇನಟ್ಟಿ ಅಷ್ಟೇ ಅಲ್ಲ ಬೇರೆ ಜಿಲ್ಲೆಗಳಿಂದಲೂ ಮೇಳಗಳು ಬಂದಿದ್ದವು.
ದಾರಿಯುದ್ದಕ್ಕೂ ಜಗ್ಗಲಗಿ ಮೇಳ, ಕಲಾವಿದರಿಗೆ ಪುಷ್ಪಮಳೆ ಸುರಿಸಿ ಸಾರ್ವಜನಿಕರು ಸ್ವಾಗತಿಸಿದರು. ಹರ ಹರ ಮಹಾದೇವ ಎಂಬ ಜಯಘೋಷ ಮೊಳಗಿಸಿದರು.
ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ, ಸಾಮಾನ್ಯ ನಾಗರಿಕರಾಗಿ ಈ ಹಬ್ಬ ಆರಂಭ ಮಾಡಿದ್ದ ಮಹೇಶ ಟೆಂಗಿನಕಾಯಿ ಅವರು ಈಗ ಶಾಸಕರಾಗಿದ್ದಾರೆ. ಈಗಲೂ ಸಹ ಉದಾಸೀನತೆ ತೋರದೇ ಅಷ್ಟೆ ಉತ್ಸಾಹದಿಂದ ಜಗ್ಗಲಗಿ ಹಬ್ಬ ಆಯೋಜನೆ ಮಾಡಿದ್ದಾರೆ. ಇದು ಸಾಮಾನ್ಯ ಕೆಲಸ ಅಲ್ಲ, ನಮ್ಮ ಹಬ್ಬ ಸಂಸ್ಕೃತಿ ಉಳಿಸಿ ಬೆಳೆಸುವ ಸಲುವಾಗಿ ಪರಿಶ್ರಮ ಪಡುತ್ತಿದ್ದಾರೆ. ಶ್ರೇಷ್ಠ ಸಂಸ್ಕೃತಿಗೆ ಬುನಾದಿ ಹಾಕಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಿಳೆಯರು, ಮಕ್ಕಳು ಸಹ ಭಾಗಿಯಾಗಿದ್ದಾರೆ. ಭಾರತೀಯ ಹಬ್ಬಗಳ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದ್ದಾರೆ. ದೇಶಿಯ ಕಲೆ ಜಗ್ಗಲಗಿಯ ನಾದ ಎಲ್ಲ ಕಡೆ ಹರಡಿದೆ. ಏನೇ ಆದರೂ ನಮ್ಮ ಸಂಸ್ಕೃತಿ ಮರೆಯಬಾರದು ಎಂದು ಹೇಳಿದರು.
ಎಲ್ಲರೂ ಕೂಡುವ ಹಬ್ಬ:
ಆಯೋಜಕ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕಳೆದ 15 ವರ್ಷಗಳಿಂದ ಜಗ್ಗಲಗಿ ಹಬ್ಬ ಆಚರಣೆ ಮಾಡುತ್ತ ಬರಲಾಗಿದೆ. ಒಂದು ಕಾಲದಲ್ಲಿ ರಂಗಪಂಚಮಿ ಎಂದರೆ ಅಶಾಂತಿಯ ವಾತಾವರಣ ಉಂಟಾಗಿ ಸಭ್ಯರು ಊರು ಬಿಟ್ಟು ಹೊರಗೆ ಹೋಗುವ ಪ್ರಸಂಗ ಇತ್ತು. ಆದರೆ, ಈಗ ಎಲ್ಲರೂ ಕೂಡಿ ಹಬ್ಬ ಮಾಡುವ ವಾತಾವರಣ ಸೃಷ್ಟಿಯಾಗಿದೆ. ನಶಿಸಿ ಹೋಗುತ್ತಿರುವ ಸಂಸ್ಕೃತಿಗೆ ಮತ್ತೆ ಪ್ರೋತ್ಸಾಹ ನೀಡಿದಂತಾಗಿದೆ ಎಂದರು. ಮೂರುಸಾವಿರ ಮಠ ಹಾಗೂ ಇತರ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಜಗ್ಗಲಗಿ ಹಬ್ಬ ಆರಂಭವಾಗಿದೆ. ವರ್ಷದಿಂದ ವರ್ಷಕ್ಕೆ ಉತ್ತಮ ಪ್ರತಿಕ್ರಿಯೆ ಕಲಾವಿದರು, ಮೇಳಗಳಿಂದ ಸಿಗುತ್ತಿದೆ. ಚರ್ಮ ವಾದ್ಯಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಒಳ್ಳೆಯ ಕೆಲಸ ಮಾಡಿದರೆ ಜನ ಕೈಜೋಡಿಸುತ್ತಾರೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿ ಎಂದರು.