ಹುಬ್ಬಳ್ಳಿ ಜಗ್ಗಲಗಿ ಹಬ್ಬ ಮಾ. 28ರಂದು

New Jaggalagi Habba new
Published on

ಹುಬ್ಬಳ್ಳಿ : ಹೋಳಿ ಹಬ್ಬದ ಅಂಗವಾಗಿ ಕಳೆದ 11 ವರ್ಷಗಳಿಂದ ಆಯೋಜಿಸುತ್ತ ಬಂದಿರುವ ‘ಹುಬ್ಬಳ್ಳಿ ಜಗ್ಗಲಗಿ ಹಬ್ಬ’ವನ್ನು ಈ ಬಾರಿ ಮಾ. 28ರಂದು ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಆಯೋಜಕ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ, ಈ ಬಾರಿಯ 12ನೇ ಹಬ್ಬದಲ್ಲಿ ರಾಜ್ಯದ ವಿವಿಧೆಡೆಯ 42 ಜಗ್ಗಲಗಿ ಮೇಳಗಳು ಭಾಗವಹಿಸಲಿವೆ ಎಂದರು.

ಅಂದು ಮಧ್ಯಾಹ್ನ 3 ಗಂಟೆಗೆ ಮೂರುಸಾವಿರ ಮಠದಿಂದ ಆರಂಭಗೊಳ್ಳುವ ಜಗ್ಗಲಗಿ ಹಬ್ಬದ ಮೆರವಣಿಗೆ ವಿಕ್ಟೋರಿಯಾ ರಸ್ತೆ, ಕೊಪ್ಪಿಕರ ರಸ್ತೆ, ಬ್ರಾಡ್ ವೇ, ದುರ್ಗದಬೈಲ್ ವೃತ್ತ, ರಾಧಾಕೃಷ್ಣ ಗಲ್ಲಿ, ಬಾರದಾನ ಸಾಲ, ಜವಳಿ ಸಾಲ, ಬೆಳಗಾಂವ ಗಲ್ಲಿ, ಪೆಂಡಾರ ಗಲ್ಲಿ, ತುಳಜಾಭವಾನಿ ವೃತ್ತ, ದಾಜಿಬಾನಪೇಟ ಮಾರ್ಗವಾಗಿ ಮರಳಿ ಮೂರುಸಾವಿರ ಮಠದ ಆವರಣ ತಲುಪುತ್ತದೆ ಎಂದು ತಿಳಿಸಿದರು.

ಹುಬ್ಬಳ್ಳಿ ಸುತ್ತಲಿನ ಸುಳ್ಳ, ಬ್ಯಾಹಟ್ಟಿ, ಛಬ್ಬಿ, ಸೂರಶೆಟ್ಟಿಕೊಪ್ಪ, ಧಾರವಾಡ, ಅರಳಿಕಟ್ಟಿ, ಅರಮಗೋಳ, ಅಮ್ಮಿನಬಾವಿ, ಸೋಮನಕೊಪ್ಪ, ಕಣವಿಹೊನ್ನಾಪುರ ಮತ್ತಿತರ ಊರುಗಳ ಜಗ್ಗಲಗಿ ತಂಡಗಳು ಭಾಗವಹಿಸಲಿವೆ. ಮಹಿಳೆಯರ ಡೊಳ್ಳು ಕುಣಿತದ ತಂಡಗಳೂ ಭಾಗವಹಿಸಲಿವೆ ಎಂದು ಹೇಳಿದರು.

ಹಾನಗಲ್ಲ ಕುಮಾರೇಶ್ವರ ಯುವಕ ಮಂಡಳದ ಬೇಡರ ವೇಷದ ತಂಡ ಪಾಲ್ಗೊಳ್ಳಲಿದೆೆ. ಸ್ವರ್ಣ ಮಯೂರಿ ತಂಡದ ವತಿಯಿಂದ ಕಾಂತಾರ ಚಿತ್ರದ ಸನ್ನಿವೇಶ ಪ್ರದರ್ಶನಗೊಳ್ಳಲಿದೆ. ಸತತ 2ನೇ ವರ್ಷ ಉಡುಪಿಯ ಕಾಡುಬೆಟ್ಟು ಪ್ರದೇಶದಿಂದ ಹುಲಿ ಕುಣಿತದ ತಂಡ, ಪ್ರಭು ಶ್ರೀರಾಮನ ವೇಷಧಾರಿ, ವಾನರರೊಂದಿಗೆ ಹನುಮನ ವೇಷಧಾರಿ ಹಾಗೂ ನಂದಿ ಮತ್ತು ನಾಗಾಸಾಧುಗಳೊಂದಿಗೆ ಪರಮೇಶ್ವರ ವೇಷಧಾರಿಯ 45 ಕಲಾವಿದರು ಪಾಲ್ಗೊಳ್ಳುವರು ಎಂದು ವಿವರಿಸಿದರು.

ಮೆರವಣಿಗೆ ಮಾರ್ಗದ ಉದ್ದಕ್ಕೂ ಹಲವಾರು ಸಂಘಟನೆಗಳು ತಂಪು ಪಾನೀಯ ಹಾಗೂ ಉಪಹಾರದ ವ್ಯವಸ್ಥೆ ಮಾಡಿವೆ. ಭಾರತೀಯ ಸಂಸ್ಕೃತಿ ಉಳಿಸುವ ಉದ್ದೇಶದಿಂದ ಆಯೋಜಿಸಿರುವ ಹುಬ್ಬಳ್ಳಿ ಜಗ್ಗಲಗಿ ಹಬ್ಬದಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ಕೋರಿದರು.

ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಸತೀಶ ಶೇಜವಾಡಕರ, ಸುಭಾಷಸಿಂಗ್ ಜಮಾದಾರ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net