

ಹುಬ್ಬಳ್ಳಿ: ಗಣೇಶ ಬಂದಾ.. ಕಾಯಿ ಕಡಬು ತಿಂದಾ… ಬಾವ್ಯಾಗ ಬಿದ್ದಾ.. ಮುಳುಗಿ ಮುಳುಗಿ ಎದ್ದ… ಹೀಗೆ ಮಕ್ಕಳು ಹಾಡಿ ನಲಿಯುವ ಗಣಪನ ಹಾಡು ಮತ್ತೆ ಕೇಳಿ ಬರುತ್ತಿದೆ. ಚಿಣ್ಣರಿಂದ ಹಿಡಿದು ಎಲ್ಲರಿಗೂ ಮುದ ನೀಡುವ ಗಣೇಶ ಮತ್ತೆ ಬರುತ್ತಿದ್ದಾನೆ. ಭಕ್ತರ ಇಷ್ಟಾರ್ಥ ಈಡೇರಿಸುವ ಪ್ರಥಮ ವಂದಿತನ ಆರಾಧನೆಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ.
ಸಾರ್ವಜನಿಕ ಗಣೇಶ ಉತ್ಸವಕ್ಕೆ ರಾಜ್ಯದ ಗಮನ ಸೆಳೆದಿರುವ ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪನೆಯಾಗಲಿರುವ ವಿನಾಯಕನ ವಿರಾಟ ರೂಪ ದರ್ಶನಕ್ಕೆ ಭಕ್ತಗಣ ಕಾತುರದಿಂದ ಕಾಯುತ್ತಿದೆ. ಮಳೆ ಬೆಳೆ ಇಲ್ಲದೇ ಸಂಕಷ್ಟದಲ್ಲಿರುವ ಭಕ್ತರು ಸಂಕಷ್ಟ ಹರ ಗಣಪನ ಆರಾಧನೆಗೆ ಸಜ್ಜಾಗಿದ್ದಾರೆ.
ಮನೆಮನೆಯಲ್ಲಿ ಆರಾಧಿಸಲ್ಪಡುವ ಗಣೇಶನನ್ನು ಸಾರ್ವಜನಿಕ ಸ್ಥಳದಲ್ಲಿಯೂ ಪ್ರತಿಷ್ಠಾಪಿಸಿ ಸಾಮೂಹಿಕವಾಗಿ ಪೂಜಿಸುವ ವಿಶೇಷ ಆಚರಣೆ ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ನಡೆಯುತ್ತದೆ. ಈ ಬಾರಿ ಇನ್ನಷ್ಟು ಉತ್ಸಾಹದೊಂದಿಗೆ ಭಕ್ತರು ಗೌರಿ ತನಯನ ಪೂಜೆಗಾಗಿ ವೇದಿಕೆ ಸಜ್ಜುಗೊಳಿಸುತ್ತಿದ್ದಾರೆ.
ಕರೊನಾ, ಪ್ರಕೃತಿ ವಿಕೋಪ ಇತ್ಯಾದಿ ಕಾರಣದಿಂದ ಕೆಲ ವರ್ಷಗಳಿಂದ ಮಂಕಾಗಿದ್ದ ಸಾರ್ವಜನಿಕ ಗಣೇಶೋತ್ಸವ ಈ ಬಾರಿ ಸಡಗರ ಹೆಚ್ಚಿಸಲಿದೆ. ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ಸಾಂಸ್ಕೃತಿಕ ರಾಜಧಾನಿ ಧಾರವಾಡ ಸೇರಿ ಸುಮಾರು 700 ಕಡೆಗಳಲ್ಲಿ ಸಾರ್ವಜನಿಕ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಇದರೊಂದಿಗೆ ಅದ್ದೂರಿ ಗಣೇಶ ಮಂಟಪಗಳು ಭಕ್ತರನ್ನು ಕೈಬೀಸಿ ಕರೆಯಲಿವೆ.
ಬೃಹತ್ ಗಣೇಶ ಮೂರ್ತಿ: ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ಮುಂಬೈ ಮಾದರಿಯ ಗಣೇಶೋತ್ಸವ ನಡೆಯುತ್ತದೆ. ಮುಂಬೈ ದೊಡ್ಡ ಗಣೇಶ ಮೂರ್ತಿಗಳಿಗೆ ಪ್ರಸಿದ್ಧಿ ಪಡೆದಿದೆ. ಇದೇ ರೀತಿ ಹುಬ್ಬಳ್ಳಿಯಲ್ಲಿ ಪ್ರತಿ ವರ್ಷ ಬೃಹತ್ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದು ವಾಡಿಕೆ.
ಅದರಂತೆ ಈ ವರ್ಷವೂ ಇಲ್ಲಿಯ ದಾಜಿಬಾನಪೇಟ, ಮರಾಠಾ ಗಲ್ಲಿ, ಹಾನಗಲ್ಲ ಚಾಳ, ಮ್ಯಾದಾರ ಓಣಿ, ಹಳೇಹುಬ್ಬಳ್ಳಿ, ಇತರೆಡೆ ದೊಡ್ಡ ಮೂತಿರ್ಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಸುಮಾರು 22, 23 ಅಡಿ ಎತ್ತರದ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಕಲಾವಿದರು ಎರಡು ತಿಂಗಳಿಂದ ಈ ಮೂತಿರ್ಗಳ ತಯಾರಿಯಲ್ಲಿ ತೊಡಗಿದ್ದಾರೆ.
ಪಂಡರಪುರದ ವಿಠ್ಠಲ: ಈ ವರ್ಷ ನಿಮಗೆ ಪಂಡರಪುರದ ವಿಠ್ಠಲ ಸ್ವಾಮಿಯು ಹುಬ್ಬಳ್ಳಿಯಲ್ಲಿಯೇ ದರ್ಶನ ನೀಡಲಿದ್ದಾನೆ. ಇಲ್ಲಿಯ ಸ್ಟೇಶನ್ ರಸ್ತೆ ಚಂದ್ರಕಲಾ ಟಾಕೀಸ್ ಪಕ್ಕದಲ್ಲಿ ಹಾಕಲಾಗಿರುವ ಸುಂದರ ರಂಗ ಸಜ್ಜಿಕೆಯಲ್ಲಿ ಪಂಡರಪುರದ ದೇವಾಲಯ ಮಾದರಿಯ ಮಂಟಪ ನಿಮಿರ್ಸಲಾಗಿದೆ. ಇದರಲ್ಲಿ ಸುಮಾರು 10 ನಿಮಿಷದ ದೃಶ್ಯಾವಳಿಯನ್ನು ಭಕ್ತರಿಗೆ ತೋರಿಸಲಾಗುತ್ತದೆ. ಶ್ರೀಮನ್ ನಾರಾಯಣನನ್ನೇ ಇಟ್ಟಿಗೆಯ ಮೇಲೆ ನಿಲ್ಲಿಸಿ ವಿಠ್ಠಲನನ್ನಾಗಿ ಮಾಡಿ ಪಂಡರಪುರದಲ್ಲಿ ಶಾಶ್ವತವಾಗಿ ನೆಲೆಸುವಂತೆ ಮಾಡಿದ ಹರಿಭಕ್ತ ಪುಂಡಲೀಕ ಪಂಡರಪುರದ ಪಾಂಡುರಂಗ ವಿಠ್ಠಲನ ರೂಪಕವನ್ನು ಅದ್ಭುತವಾಗಿ ಪ್ರದಶಿರ್ಸಲಾಗುತ್ತದೆ ಎಂದು ಗಣೇಶ ಉತ್ಸವ ಮಂಡಳಿಯ ಶ್ರೀನಿವಾಸ ಬೋಚಗೇರಿ ಹೇಳಿದರು.
ಸತಿ ಅನುಸೂಯಾ: ಹುಬ್ಬಳ್ಳಿ ದುರ್ಗದಬೈಲ ಪ್ರದೇಶದಲ್ಲಿ ಅಹಮದಾಬಾದನ ಜೈನ್ ಮಂದಿರದ ಮಾದರಿ ನೋಡಬಹುದು. ಈ ಬೃಹತ್ ಮಂಟಪದ ಒಳಗೆ ಆಕರ್ಷಕ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಈ ಬಾರಿ ಸತಿ ಅನುಸೂಯಾ ಎದುರಿಸಿದ ಸತ್ವ ಪರೀಕ್ಷೆಗಳನ್ನು ಇಲ್ಲಿ ತೋರಿಸಗುತ್ತಿದೆ. ಭಕ್ತರು ಪೌರಾಣಿಕ ಕಥೆಯನ್ನು ಇಲ್ಲಿ ನೋಡಿ ಆನಂದಿಸಬಹುದು ಎಂದು ಗಣೇಶೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ರೇವಣಕರ ತಿಳಿಸಿದರು.
ಚಂದ್ರಯಾನ: ಹುಬ್ಬಳ್ಳಿ ಶೀಲವಂತರ ಓಣಿಯಲ್ಲಿ ಈ ಬಾರಿ ಚಂದ್ರಯಾನದ ರೂಪಕ ನೋಡಬಹುದು. ಇತ್ತೀಚೆಗೆ ನಡೆದ ಚಂದ್ರಯಾನದ ಸಮಗ್ರ ವಿವರವನ್ನು ಭಕ್ತರಿಗೆ ನೀಡಲಾಗುತ್ತಿದೆ. ಗಣೇಶನ ಮುಂದೆ ಇರುವ ಚಂದ್ರ ಹಾಗೂ ಅದರ ಮೇಲೆ ಲ್ಯಾಂಡರ್ ಹಾಗೂ ಉಪಗ್ರಹಗಳನ್ನು ಚಿತ್ರಿಸಲಾಗುತ್ತಿದೆ. 2.10 ನಿಮಿಷದ ಶೋ ಇರುತ್ತದೆ ಎಂದು ಶಿವಲಿಂಗ ಕಮಡೊಳ್ಳಿಶೆಟ್ರು ಹೇಳಿದರು.
ಹೀಗೆ ಹತ್ತು ಹಲವು ರೂಪಕ, ಪೌರಾಣಿಕ, ಐತಿಹಾಸಿಕ, ಆಧುನಿಕ ತಂತ್ರತ್ಞಾನದ ವೃತ್ತಾಂತಗಳನ್ನು ಭಕ್ತರು ಕಣ್ತುಂಬಿಕೊಳ್ಳಬಹುದು. ಇದಕ್ಕಾಗಿ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ.
ಪ್ರಸಾದ ವ್ಯವಸ್ಥೆ: ಸಾಮಾನ್ಯವಾಗಿ ಐದು ದಿನಗಳವರೆಗೆ ಮನೆಮನೆಯಲ್ಲಿ ಗಣೇಶನ ಪ್ರತಿಷ್ಠಾಪಿಸಿ ಪೂಜಿಸಿದ ನಂತರ ವಿಸರ್ಜನೆ ಮಾಡುತ್ತಾರೆ. ಆ ನಂತರ ಆರನೇ ದಿನದಿಂದ ಹುಬ್ಬಳ್ಳಿ ಸಾರ್ವಜನಿಕ ಗಣೇಶೋತ್ಸವ ಹೆಚ್ಚು ರಂಗು ಪಡೆಯುತ್ತದೆ. ಭಕ್ತರಿಗಾಗಿ ಎಲ್ಲ ಕಡೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ.