

ಹುಬ್ಬಳ್ಳಿ: ಇಲ್ಲಿಯ ಕೋರ್ಟ್ ವೃತ್ತದಿಂದ ದೇಸಾಯಿ ಕ್ರಾಸ್ ವರೆಗೆ ಫ್ಲೈಓವರ್ ಮುಂದುವರಿಸುವ ಅಥವಾ ಪ್ರಸ್ತುತ ಅಲ್ಲಿರುವ ಅಂಡರ್ ಪಾಸ್ ನ್ನು ತೆಗೆದು ಹಾಕಿ ಮೊದಲಿನಂತೆ ರಸ್ತೆ ನಿರ್ಮಾಣ ಮಾಡುವ ಕುರಿತು ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆದಿದೆ.
ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಪ್ರಾತ್ಯಕ್ಷಿಕೆ ವೀಕ್ಷಿಸಿದ ನಂತರ ಚರ್ಚಿಸಲಾಯಿತು.
ಸಭಾಪತಿ ಹೊರಟ್ಟಿ ಅವರು ಮಾತನಾಡಿ, ರಸ್ತೆ ವ್ಯವಸ್ಥೆ ಸರಿಯಾಗಿಲ್ಲದೇ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಗಮನ ಹರಿಸಬೇಕು ಎಂದು ಸೂಚಿಸಿದರು.
ಚನ್ನಮ್ಮ ವೃತ್ತ, ಕೋರ್ಟ್ ವೃತ್ತದಿಂದ ಸರ್ಕಿಟ್ ಹೌಸ್ ಮತ್ತು ರೈಲ್ವೆ ಸೇತುವೆ ಬಳಸಿ ಕೇಶ್ವಾಪುರಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಫ್ಲೈಓವರ್ ಅಗತ್ಯವಿದೆಯೇ ಎಂಬುದರ ಬಗ್ಗೆ ವೈಜ್ಞಾನಿಕ ರೀತಿಯಲ್ಲಿ ಯೋಚಿಸಿ ನಿರ್ಣಯಿಸಬೇಕು.
ಫ್ಲೈಓವರ್ ಅಗತ್ಯ ಎಂದಾದಲ್ಲಿ ಇದರಿಂದಾಗುವ ಸಾಧಕ ಬಾಧಕಗಳ ಬಗ್ಗೆ ಸರಿಯಾಗಿ ಅರಿತುಕೊಳ್ಳಬೇಕು. ಫ್ಲೈಓವರ್ ಬದಲಿಗೆ ಅಲ್ಲಿರುವ ಅಂಡರ್ ಪಾಸ್ ನ್ನು ತೆಗೆದುಹಾಕಿ ಈ ಹಿಂದೆ ಇದ್ದ ರಸ್ತೆ ನಿರ್ಮಾಣ ಮಾಡುವುದು ಸೂಕ್ತ ಎನ್ನುವುದಾದರೆ ಪರಿಷ್ಕೃತ ಪ್ರಸ್ತಾವನೆಯನ್ನು ಜನೆವರಿ ಅಂತ್ಯದೊಳಗೆ ಸಲ್ಲಿಸಲು ಹೊರಟ್ಟಿಯವರು ಗಡುವು ನೀಡಿದರು.
ಹುಬ್ಬಳ್ಳಿ ನಗರದ ರಾಣಿ ಚೆನ್ನಮ್ಮ ಸರ್ಕಲ್ ದಿಂದ ನವಲಗುಂದ ಪಟ್ಟಣಕ್ಕೆ ಹೋಗುವ ರಸ್ತೆಯಲ್ಲಿ ಜನ, ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು, ಎಂಜಿನಿಯರ್‌ಗಳು ಇಲ್ಲಿನ ವಾಸ್ತವ ಸ್ಥಿತಿ ಅರಿಯಬೇಕು. ನವಲಗುಂದ, ಬಾಗಲಕೋಟೆ, ವಿಜಯಪುರಕ್ಕೆ ಸಾರ್ವಜನಿಕರು ಈ ರಸ್ತೆ ಬಳಸಿಯೇ ನಿತ್ಯ ಸಂಚಾರ ಮಾಡುತ್ತಾರೆ. ಹಾಗಾಗಿ ವಿಳಂಬ ಮಾಡದೇ ಅಧಿಕಾರಿಗಳು ಗಮನ ಹರಿಸಿ ಪರಿಷ್ಕೃತ ಪ್ರಸ್ತಾವನೆ ಕಾಲಮಿತಿಯೊಳಗೆ ಸಲ್ಲಿಸಲು ನಿರ್ದೇಶನ ನೀಡಿದರು.
ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ, ಕಾರ್ಯದರ್ಶಿ ಸತ್ಯನಾರಾಯಣ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿ ಮಹೇಶ ವಾಳ್ವೇಕರ್, ಹೆದ್ದಾರಿ ಇಲಾಖೆ ಅಧಿಕಾರಿಗಳು, ಇತರರು ಇದ್ದರು.