ಹು-ಧಾ ಅವಳಿ ನಗರ ಬಂದ್ ಯಶಸ್ವಿ

h9-Band Channamma Circle 1
Published on

ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಅಂಬೇಡ್ಕರ್ ಕುರಿತು ಅವಹೇಳನವಾಗಿ ಮಾತನಾಡಿರುವುದು ಖಂಡಿಸಿ ಹಾಗೂ ಅಮಿತ್ ಷಾ ರಾಜೀನಾಮೆಗೆ ಆಗ್ರಹಿಸಿ ದಲಿತ ಸಂಘಟನೆಗಳು, ಡಾ. ಅಂಬೇಡ್ಕರ ಅಭಿಮಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಗುರುವಾರ ಕರೆ ನೀಡಿದ್ದ ಹು-ಧಾ ಅವಳಿ ನಗರ ಬಂದ್ ಯಶಸ್ವಿಯಾಯಿತು.

ಬೆಳಗ್ಗೆ 6 ಗಂಟೆಯಿಂದಲೇ ಪ್ರತಿಭಟನಾಕರರು ವಾಹನ ಸಂಚಾರ ತಡೆದು ಪ್ರತಿಭಟಿಸಿದರು. ಬಂದ್‌ಗೆ ಸಹಕರಿಸದೆ ರಸ್ತೆಗಿಳಿದಿದ್ದ ಸಾರಿಗೆ ಬಸ್‌ಗಳ ಟೈರ್‌ನಿಂದ ಗಾಳಿಬಿಟ್ಟು ಆಕ್ರೋಶ ಹೊರ ಹಾಕಿದರು.

ಕೆಲವರು ಹಾಳಾದ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರೆ, ಗುರುನಾಥ ಉಳ್ಳಿಕಾಶಿ ನೇತೃತ್ವದಲ್ಲಿ ಅಮಿತ್‌ಷಾ ಅವರ ಪ್ರತಿ ಕೃತಿ ದಹಿಸಲಾಯಿತು. ಟ್ರಾೃಕ್ಟರ್ ಮೂಲಕ ಚನ್ನಮ್ಮ ವೃತ್ತದ ಪ್ರದಕ್ಷಿಣೆ ಹಾಕಲಾಯಿತು. ಹಲವರು ಹತ್ತಾರು ಚಕ್ಕಡಿಗಳ ಮೂಲಕ ಚನ್ನಮ್ಮ ವೃತ್ತಕ್ಕೆ ಆಗಮಿಸಿ ಬಂದ್‌ಗೆ ಬೆಂಬಲ ಸೂಚಿಸಿದರು. ಯುವಕರು ಬೈಕ್ ರ‌್ಯಾಲಿ ನಡೆಸಿ ಅಮಿತ್ ಷಾ ವಿರುದ್ಧ ಘೋಷಣೆ ಕೂಗಿದರು.

ಹುಬ್ಬಳ್ಳಿಯ ವಿವಿಧ ಬಡಾವಣೆಗಳಿಂದ ತಂಡೋಪ ತಂಡವಾಗಿ ಆಗಮಿಸಿದ ಅಂಬೇಡ್ಕರ್ ಅಭಿಮಾನಿಗಳು ನಗರದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡರು. ಟೈರ್‌ಗೆ ಬೆಂಕಿ ಹಚ್ಚಿ ಅಮಿತ್ ಷಾ ಭಾವಚಿತ್ರಕ್ಕೆ ಪೊರಕೆ ಮತ್ತು ಚಪ್ಪಲಿಯಿಂದ ಹೊಡೆದು ಧಿಕ್ಕಾರ ಕೂಗಿದರು.

ಬುಧವಾರವೇ ಶಾಲಾ-ಕಾಲೇಜ್‌ಗಳಿಗೆ ರಜೆ ಘೋಷಣೆ ಮಾಡಿದ್ದರಿಂದ ವಿದ್ಯಾರ್ಥಿಗಳ ಪರದಾಟ ತಪ್ಪಿತ್ತು. ಹೊಸ ಬಸ್ ನಿಲ್ದಾಣ, ಸಿಬಿಟಿ ಹಾಗೂ ಹೊಸೂರು ಬಳಿಯ ಬಸ್ ನಿಲ್ದಾಣದಿಂದ ಬಸ್‌ಗಳು ಸಂಚರಿಸಲಿಲ್ಲ. ಪರ ಊರಿನಿಂದ ಆಗಮಿಸಿದ್ದ ಜನರು, ಆಟೋ, ಖಾಸಗಿ ವಾಹನ ಸಂಚಾರ ಇಲ್ಲದ್ದರಿಂದ ಪರದಾಡಿದರು.

ಎಪಿಎಂಸಿ ಮಾರುಕಟ್ಟೆ, ಹಣ್ಣು-ತರಕಾರಿ, ದಿನಸಿ ಸೇರಿ ಎಲ್ಲ ವ್ಯಾಪಾರಸ್ಥರು ಅಂಗಡಿ-ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್‌ಗೊಳಿಸಿ ಬೆಂಬಲಿಸಿದ್ದರು. ಚಿತ್ರಮಂದಿರ, ಪೆಟ್ರೋಲ್ ಬಂಕ್, ಮಾಲ್‌ಗಳ ಬಾಗಿಲು ತೆರೆದಿರಲಿಲ್ಲ.

ಕಿತ್ತೂರು ಚನ್ನಮ್ಮ ವೃತ್ತ ಹೊರತುಪಡಿಸಿ ನಗರದ ಪ್ರಮುಖ ರಸ್ತೆಗಳಾದ ಕೊಪ್ಪಿಕರ್ ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಕೋಯಿನ್ ರೋಡ್, ದುರ್ಗದಬೈಲ್ ವೃತ್ತ, ಜನತಾ ಬಜಾರ್, ಸ್ಟೇಷನ್ ರಸ್ತೆ, ಹಳೇ ಹುಬ್ಬಳ್ಳಿ ದುರ್ಗದಬೈಲ್ ಸೇರಿ ಹಲವು ರಸ್ತೆಗಳು ಹಾಗೂ ಮಾರುಕಟ್ಟೆಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.

ಬಂದ್‌ಗೆ ಕಾಂಗ್ರೆಸ್ ಕೂಡ ಬೆಂಬಲಿಸಿತ್ತು. ಹೀಗಾಗಿ ಕಾಂಗ್ರೆಸ್ ಪಾಲಿಕೆ ಸದಸ್ಯರು ಮತ್ತು ಮುಖಂಡರು, ತಮ್ಮ ಬೆಂಬಲಿಗರ ಜತೆಗೆ ತಮ್ಮ ವಾರ್ಡ್ ವ್ಯಾಪ್ತಿಯ ಪ್ರಮುಖ ವೃತ್ತಗಳಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು.

ಬ್ಯಾಂಕ್, ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿದ್ದರೂ ಸಿಬ್ಬಂದಿ ಮತ್ತು ಜನರ ಕೊರತೆಯಿಂದ ಕಾರ್ಯ ನಿರ್ವಹಿಸಲಿಲ್ಲ. ಬಳಿಕ ಸಂಜೆ 6 ಗಂಟೆ ನಂತರವೂ ವ್ಯಾಪರ-ವಹಿವಾಟು ಅಷ್ಟಕಷ್ಟೆ ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net