

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ಘಟಕದ ಹಲವು ಪೊಲೀಸ್ ಠಾಣೆಗಳಲ್ಲಿ ಪಿಎಸ್ಐ (ಪೊಲೀಸ್ ಸಬ್ ಇನ್ಸ್ಪೆಕ್ಟರ್) ಹುದ್ದೆಗಳು ಖಾಲಿ ಉಳಿದುಕೊಂಡಿವೆ. ಇದರಿಂದಾಗಿ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಇತರೆ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಾಗಿದೆ.
ಬೆಂಗಳೂರು ನಂತರ ಎರಡನೇ ಅತಿದೊಡ್ಡ ಅವಳಿ ನಗರವಾದ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಮಂಜೂರಾದ 53 ಹುದ್ದೆಗಳ ಪೈಕಿ ಕೇವಲ 22 ಪಿಎಸ್ಐಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 31 ಪಿಎಸ್ಐ ಹುದ್ದೆಗಳು ಖಾಲಿ ಇವೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾನೂನು
ಸುವ್ಯವಸ್ಥೆ ಕಾಪಾಡುವ 15 ಠಾಣೆಗಳಿವೆ. 4 ಸಂಚಾರ ಪೊಲೀಸ್ ಠಾಣೆಗಳಿವೆ. 2 ವಿಶೇಷ (ಸೈಬರ್ ಕ್ರೖೆಂ ಮತ್ತು ಆರ್ಥಿಕ ಅಪರಾಧ ಮತ್ತು ಮಾದಕ ದ್ರವ್ಯಗಳ ಠಾಣೆ) ಠಾಣೆಗಳಿವೆ.
ಕೆಲ ಠಾಣೆಗಳಲ್ಲಿ ಒಬ್ಬ ಪಿಎಸ್ಐ ಇದ್ದರೆ, ಮತ್ತೆ ಕೆಲ ಠಾಣೆಗಳಲ್ಲಿ ಪಿಎಸ್ಐಗಳೇ ಇಲ್ಲ. ಇದರಿಂದಾಗಿ ಇನ್ಸ್ಪೆಕ್ಟರ್ಗಳೇ ಎಲ್ಲ ಜವಾಬ್ದಾರಿ ನಿರ್ವಹಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈಗಾಗಲೇ ಸಿಬ್ಬಂದಿ ಕೊರತೆಯಿಂದ ಸುಧಾರಿತ ಬೀಟ್ ಸಿಸ್ಟಂ ನಿರ್ವಹಣೆ ಕಷ್ಟವಾಗಿದೆ. ಈ ನಡುವೆ ಪಿಎಸ್ಐಗಳ ಕೊರತೆ ಬೇರೆ. ಇದರಿಂದಾಗಿ ನೈಟ್ ಬೀಟ್, ಪೆಟ್ರೋಲಿಂಗ್, ಬಂದೋಬಸ್ತ್, ಅಪರಾಧ ಪ್ರಕರಣಗಳ ವೇಳೆ ಪಿಐಗಳು ಸ್ವತಃ ತಾವೇ ತೆರಳಬೇಕಾಗಿದೆ.
ಏಳು ವರ್ಷ ಇಲ್ಲ ವರ್ಗಾವಣೆ
ಪೊಲೀಸ್ ಇಲಾಖೆಯಲ್ಲಿ ಒಂದು ಘಟಕಕ್ಕೆ ನಿಯೋಜನೆಯಾದರೆ 7 ವರ್ಷ ಬೇರೆಡೆ ವರ್ಗಾವಣೆಗೆ ಅವಕಾಶ ಇರುವುದಿಲ್ಲ. ಗಂಡ- ಹೆಂಡತಿ ಇಬ್ಬರೂ ಕರ್ತವ್ಯದಲ್ಲಿದ್ದರೆ ಹಾಗೂ ವಿಶೇಷ ಸಂದರ್ಭದಲ್ಲಿ ಮಾತ್ರ ವರ್ಗಾವಣೆಗೆ ಅವಕಾಶವಿದೆ. ಈ ಕಾರಣಕ್ಕೆ ಕಮಿನಷರೇಟ್ ಸಹವಾಸ ಬೇಡ ಎನ್ನುತ್ತಾರೆ ಹಲವು ಪಿಎಸ್ಐಗಳು. ಪಿಎಸ್ಐಗಳ ಕೊರತೆಗೆ ಇದೂ ಒಂದು ಕಾರಣ ಎನ್ನಬಹುದು.
ಠಾಣೆಗೆ ಒಬ್ಬರೇ ಸಬ್ಇನ್ಸ್ಪೆಕ್ಟರ್
ಪಿಎಸ್ಐ ಹುದ್ದೆಗಳಿಗೆ ಶೇ. 70ರಷ್ಟು ನೇರವಾಗಿ ಹಾಗೂ ಶೇ. 30ರಷ್ಟು ಬಡ್ತಿ ಹೊಂದಿದವರನ್ನು ನೇಮಿಸಬೇಕು. ಠಾಣೆಗೆ ಇಬ್ಬರು ಪಿಎಸ್ಐ (ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ವಿಭಾಗ) ನೇಮಿಸಬೇಕು ಎಂಬ ನಿಯಮವಿದೆ. ಆದರೆ, ಸದ್ಯ ಅವಳಿ ನಗರದ ಬಹುತೇಕ ಠಾಣೆಗಳಲ್ಲಿ ಒಬ್ಬರೇ ಪಿಎಸ್ಐ ಗಳಿದ್ದಾರೆ. ಕೆಲ ಠಾಣೆಗಳಲ್ಲಿ ಪಿಎಸ್ಐಗಳೇ ಇಲ್ಲ.
ಬೇಕಿದೆ ಪರ್ಯಾಯ ವ್ಯವಸ್ಥೆ
ಹುಬ್ಬಳ್ಳಿ- ಧಾರವಾಡದಲ್ಲಿ ಹಲವು ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಅಪರಾಧ ಪ್ರಕರಣಗಳು ಇಲ್ಲಿ ಹೆಚ್ಚಾಗಿರುತ್ತವೆ. 18 ಪಿಎಸ್ಐಗಳು ತರಬೇತಿ ಪಡೆಯುತ್ತಿದ್ದು, ತರಬೇತಿ ಬಳಿಕ ಪೋಸ್ಟಿಂಗ್ ನೀಡಲಾಗುತ್ತದೆ. ಅಲ್ಲಿಯವರೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂಬ ಕೂಗು ಕೇಳಿಬಂದಿದೆ.ಇತ್ತೀಚೆಗೆ ನೇಮಕವಾದ 18 ಪಿಎಸ್ಐಗಳು ತರಬೇತಿ ಪಡೆಯುತ್ತಿದ್ದು, ಶೀಘ್ರವೇ ಕರ್ತವ್ಯಕ್ಕೆ ನಿಯುಕ್ತಿಗೊಳ್ಳಲಿದ್ದಾರೆ. ಉಳಿದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. | ಲಾಭೂರಾಮ ಪೊಲೀಸ್ ಆಯುಕ್ತ
ಸ್ವತಂತ್ರ ಠಾಣೆಗೆ ಬೇಡಿಕೆ
ನೇರ ನೇಮಕಾತಿಯಾದ ಪಿಎಸ್ಐಗಳು ಕಮಿಷನರೇಟ್ ಘಟಕದ ಬದಲು ಸ್ವತಂತ್ರ ಠಾಣೆಯನ್ನು ಬಯಸುತ್ತಾರೆ. ಕಮಿಷನರೇಟ್ ಘಟಕದಲ್ಲಿ ಇನ್ಸ್ಪೆಕ್ಟರ್ ಅಣತಿಯಂತೆ ಕೆಲಸ ಮಾಡಬೇಕಾಗುತ್ತದೆ. ಮೇಲಧಿಕಾರಿಗಳ ಓಡಾಟ ಹೆಚ್ಚಾಗಿರುತ್ತದೆ. ಕೆಲ ಠಾಣೆಗಳಲ್ಲಿ ಪ್ರತ್ಯೇಕ ಕೊಠಡಿ, ಸರಿಯಾದ ಖುರ್ಚಿ ವ್ಯವಸ್ಥೆ ಇರುವುದಿಲ್ಲ ಎಂಬ ಆರೋಪವಿದೆ. ಹಾಗಾಗಿ, ಹೇಗಾದರೂ ಮಾಡಿ, ಪ್ರಭಾವ ಬೀರಿ ಸ್ವತಂತ್ರ ಠಾಣೆಗೆ ಹೋಗಲು ಪ್ರಯತ್ನಿಸುತ್ತಾರೆ. ಈ ಕಾರಣದಿಂದ ಪಿಎಸ್ಐ ಕೊರತೆ ಹೆಚ್ಚಾಗುತ್ತಿದೆ ಎಂಬುವ ಮಾತು ಇಲಾಖೆಯಲ್ಲೇ ಚಾಲ್ತಿಯಲ್ಲಿದೆ.