

ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಬೆನ್ನಲ್ಲೇ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯೂ ಅಂಥದ್ದೇ ಯಡವಟ್ಟು ಮಾಡಿಕೊಂಡಿದೆ. ಬೇಕಾಬಿಟ್ಟಿಯಾಗಿ ತ್ರಿವರ್ಣ ಧ್ವಜ ಮುದ್ರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ಮಹಾನಗರ ಪಾಲಿಕೆ ಆರಂಭದಲ್ಲೇ ಯಡವಟ್ಟು ಮಾಡಿಕೊಂಡಿದೆ.
ರಾಜ್ಯ ಸರ್ಕಾರದ ಸೂಚನೆಯಂತೆ ‘ಹರ್ ಘರ್ ತಿರಂಗಾ’ ಅಭಿಯಾನಕ್ಕಾಗಿ ಈ ಬಾರಿ 1 ಲಕ್ಷ ತ್ರಿವರ್ಣ ಧ್ವಜ ಖರೀದಿಸಿದೆ. ಆದರೆ, ಇದರಲ್ಲಿ ಹಲವು ಧ್ವಜಗಳು ದೋಷಪೂರಿತವಾಗಿವೆ. ಬೇಕಾಬಿಟ್ಟಿಯಾಗಿ ಧ್ವಜ ತಯಾರಿಸಲಾಗಿದೆ. ಕೇಸರಿ, ಬಿಳಿ, ಹಸಿರು ಬಣ್ಣಗಳ ಅಳತೆ ಹೆಚ್ಚು ಕಡಿಮೆಯಾಗಿದೆ. ಉದ್ದ ಮತ್ತು ಅಗಲ ನಿಯಮಾನುಸಾರ ಇಲ್ಲ. ಅಶೋಕ ಚಕ್ರ ಮಧ್ಯದಲ್ಲಿ ಇರದೇ ಎಡಕ್ಕೆ ಹಾಗೂ ಬಲಕ್ಕೆ ಮುದ್ರಿಸಲಾಗಿದೆ. ಅನೇಕ ಧ್ವಜಗಳ ಹೊಲಿಗೆ ಸಡಿಲಗೊಂಡಿವೆ. ಮತ್ತೆ ಕೆಲ ಧ್ವಜಗಳು ಹರಿದಿವೆ.
ಇಂಥ ಧ್ವಜಗಳನ್ನು ಖರೀದಿಸಿರುವ ಮಹಾನಗರ ಪಾಲಿಕೆ ಅವುಗಳನ್ನು ಪಾಲಿಕೆ ಸದಸ್ಯರ ಮೂಲಕ ಸಾರ್ವಜನಿಕರಿಗೆ ಹಂಚಲು ಮುಂದಾಗಿದೆ. ಶೇ. 70ಕ್ಕಿಂತ ಹೆಚ್ಚು ದೋಷಪೂರಿತ ಧ್ವಜಗಳು ವಲಯ 9ರ ಕೆಲ ವಾರ್ಡ್ಗಳಲ್ಲಿ ಕಂಡುಬಂದಿವೆ. ಖರೀದಿಸಿದ ಧ್ವಜಗಳು ಸರಿಯಾಗಿ ಇವೆಯೇ ಎಂಬುದನ್ನೂ ಗಮನಿಸಿದೇ ವಲಯಾಧಿಕಾರಿಗಳು ಪಾಲಿಕೆ ಸದಸ್ಯರಿಗೆ ಹಂಚಿಕೆ ಮಾಡಿದ್ದಾರೆ. ಇಂತಹ ಧ್ವಜಗಳನ್ನು ಹಂಚಿದರೆ ಖಂಡಿತ ಛೀಮಾರಿ ಹಾಕಿಸಿಕೊಳ್ಳಬೇಕಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಪಾಲಿಕೆ ಸದಸ್ಯರೊಬ್ಬರು ‘ವಿಜಯವಾಣಿ’ ತಿಳಿಸಿದರು.
ಹರ್ ಘರ್ ತಿರಂಗಾ ಅಭಿಯಾನಕ್ಕೆ ದಿನಗಣನೆ ಆರಂಭವಾಗಿರುವ ಈ ಸಂದರ್ಭದಲ್ಲಿ ರಾಷ್ಟ್ರಧ್ವಜದ ಘನತೆ, ಗೌರವ ಕಾಪಾಡಿಕೊಳ್ಳುವ ಹೊಣೆಗಾರಿಕೆ ಪಾಲಿಕೆ ಹೆಗಲ ಮೇಲೇರಿದೆ. ಈಗಲಾದರೂ ತಪ್ಪು ತಿದ್ದಿಕೊಂಡು ಧ್ವಜ ನಿಯಮದಂತೆ ನಿರ್ವಿುಸಿದ ಉತ್ತಮ ದರ್ಜೆಯ ಧ್ವಜಗಳನ್ನು ಮಾತ್ರ ಜನರಿಗೆ ಹಂಚಿಕೆ ಮಾಡಬೇಕು ಎಂಬುದು ‘ವಿಜಯವಾಣಿ’ ಕಳಕಳಿಯಾಗಿದೆ.
ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಮಹಾನಗರ ಪಾಲಿಕೆ ವತಿಯಿಂದ ಖರೀದಿಸಿದ ಧ್ವಜಗಳಲ್ಲಿ ಶೇ.10ರಿಂದ 20ರಷ್ಟು ಧ್ವಜಗಳು ಹಾನಿಯಾಗಿವೆ. ಈ ಕುರಿತು ಈಗಾಗಲೇ ಧ್ವಜ ತಯಾರಿಸಿದವರಿಗೆ ತಿಳಿಸಿದ್ದೇವೆ. ಅಂತಹ ಧ್ವಜಗಳನ್ನು ವಾಪಸ್ ಪಡೆದು ಉತ್ತಮವಾದ ಧ್ವಜಗಳ್ನು ಕಳುಹಿಸಲು ವಲಯಾಧಿಕಾರಿಗಳಿಗೆ ಸೂಚಿಸಲಾಗಿದೆ.| ಡಾ.ಗೋಪಾಲಕೃಷ್ಣ ಬಿ., ಹು-ಧಾ ಪಾಲಿಕೆ ಆಯುಕ್ತ