

ಹುಬ್ಬಳ್ಳಿ: ರಾಜ್ಯ ಸರ್ಕಾರ ಇತ್ತೀಚೆಗೆ ಮಂಡಿಸಿರುವ ಬಜೆಟ್ ನಲ್ಲಿ ಹುಬ್ಬಳ್ಳಿ- ಧಾರವಾಡ ಸೇರಿ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ. ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣ ಬಿಟ್ಟರೆ, ಬೇರೆ ಹೊಸ ಕನಸುಗಳ ಸಾಕಾರದ ಬಗ್ಗೆ ಇದರಲ್ಲಿ ಪ್ರಸ್ತಾಪಿಸಲಾಗಿಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆಕ್ಷೇಪಿಸಿದ್ದಾರೆ.
ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಿದ ಅವರು, ಕೇಂದ್ರದ ಹಲವು ಯೋಜನೆಗಳು ಜಾರಿಯಲ್ಲಿದ್ದರೂ ಅವುಗಳ ಬಗ್ಗೆ ಪ್ರಸ್ತಾಪಿಸಿಲ್ಲ. ಜಲಜೀವನ್ ಮಿಶನ್, ಅಮೃತ ನಗರ, 5 ಕೆಜಿ ಅಕ್ಕಿ, ಉದ್ಯೋಗ ಖಾತರಿ, ಸ್ಮಾರ್ಟ್ ಸಿಟಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ. ಅಂತರ್ಜಲ ಹೆಚ್ಚಳಕ್ಕೆ ಮಳೆ ನೀರು ಕೊಯ್ಲು ಕಡ್ಡಾಯ ಮಾಡುವ ಬಗ್ಗೆ ಮಾತಿಲ್ಲ. ಬೆಳಗಾವಿ ಜಿಲ್ಲೆ ಹಿಡಕಲ್ ಡ್ಯಾಂನಿಂದ ಧಾರವಾಡದ ಬೇಲೂರು ಎಸ್ಟೇಟ್ ಗೆ ನೀರು ತರುವ ಯೋಜನೆಗೆ ಸಚಿವರುಗಳೇ ಅಡ್ಡಿ ಪಡಿಸುತ್ತಿದ್ದಾರೆ. ಮಹದಾಯಿ ವಿಚಾರದಲ್ಲಿ ಕೇಂದ್ರದ ಅನುಮತಿಗೆ ರಾಜ್ಯ ಸರ್ಕಾರದ ಕ್ರಮಗಳ ಬಗ್ಗೆ ಪ್ರಸ್ತಾಪಿಸಿಲ್ಲ ಎಂದು ಹೇಳಿದ್ದಾರೆ.
ಇಂಟಿಗ್ರೇಟೆಡ್ ಟೌನ್ ಶಿಪ್ ಯೋಜನೆ, ಕಾನೂನು ಸುವ್ಯವಸ್ಥೆ, ಐಟಿ ಪಾರ್ಕ್ ಸುಧಾರಣೆ, ರಸ್ತೆ, ಪ್ರವಾಸೋದ್ಯಮ ಅಭಿವೃದ್ಧಿ, ಟ್ರಾಫಿಕ್ ಸುಧಾರಣೆ ಮುಂತಾದ ವಿಷಯಗಳ ಮೇಲೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಹಳ್ಳ ಹಿಡಿದ ಬಿಆರ್ ಟಿಎಸ್: ಹುಬ್ಬಳ್ಳಿ ಧಾರವಾಡ ಬಿಆರ್ ಟಿಎಸ್ ಯೋಜನೆ ಹಳ್ಳ ಹಿಡಿದು ಹೋಗಿದೆ. ಚಿಗರಿ ಬಸ್ ನಲ್ಲಿ ಎಸಿ ಕೆಲಸ ಮಾಡುತ್ತಿಲ್ಲ, ನಿಲ್ದಾಣಗಳಲ್ಲಿ ಸರ್ವರ್ ಇರುವುದಿಲ್ಲ, ಡೋರ್ ಸೆನ್ಸರ್ ಹೋಗಿವೆ. ಡಿಜಿಟಲ್ ಅನೌನ್ಸಮೆಂಟ್ ಕೆಟ್ಟು ಹೋಗಿವೆ. ಪರ ಊರಿನಿಂದ ಬಂದವರು ಯಾವ ಸ್ಟಾಪ್ ಎಂದು ತಿಳಿಯದೇ ಪರದಾಡುತ್ತಿದ್ದಾರೆ. ಇದರ ಮಧ್ಯೆ ಚಿಗರಿ ಬಸ್ ಚಾಲಕರ ವರ್ತನೆಯು ಸರಿ ಇಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ.
ಪ್ರಯಾಣಿಕರು ಇಳಿಯುವ ಹಾಗೂ ಹತ್ತುವ ಮೊದಲೇ ಬಸ್ ಚಲಿಸುವುದು, ಅಮಾಯಕರು ನಿಲ್ದಾಣದ ಬಗ್ಗೆ ಕೇಳಿದರೂ ಉತ್ತರಿಸದಿರುವುದು ಈ ಎಲ್ಲ ಕಾರಣಗಳಿಗೆ ಹೊರಗಿನಿಂದ ಬಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ಣ ರಿಂಗ್ ರೋಡ್ ಮತ್ತು ಬಿಡನಾಳ ವರೆಗೆ ಫ್ಲೈಓವರ್ ನಿರ್ಮಾಣಕ್ಕೆ ಅನುಮೋದನೆ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಈ ಸಂಬಂಧ ರಾಜ್ಯ ಸರ್ಕಾರ ಡಿಪಿಆರ್ ಸಿದ್ಧಪಡಿಸಬೇಕು. ಹುಬ್ಬಳ್ಳಿ ಫ್ಲೈಓವರ್ ಕಾಮಗಾರಿಗೆ ವೇಗ ನೀಡಬೇಕು. ಹುಬ್ಬಳ್ಳಿ ಧಾರವಾಡ ಬೆಳಗಾವಿ ತ್ರಿವಳಿ ನಗರದ ಎಲ್ಲ ಕಡೆ ಆಟೋ ಮೀಟರ್ ಕಡ್ಡಾಯ ಮಾಡಬೇಕು.
ಹುಬ್ಬಳ್ಳಿ ಹಳೇ ಬಸ್ ನಿಲ್ದಾಣಕ್ಕೆ ರಾತ್ರಿ 9ರ ನಂತರ ಎಲ್ಲ ಬಸ್ ಗಳು ಬಂದು ಹೋಗುವ ವ್ಯವಸ್ಥೆ ಮಾಡಬೇಕು. ನಗರದ ರಸ್ತೆಗಳ ಗುಂಡಿ ಮುಚ್ಚಬೇಕು. ಪ್ರವಾಸೋದ್ಯಮ ಅಭಿವೃದ್ಧಿಗೆ ಕೆಎಸ್ಟಿಡಿಸಿ ಮಾನ್ಯತೆಯ ಹೋಟೆಲ್, ಮಾಹಿತಿ ಕೇಂದ್ರ ತೆರೆಯಬೇಕು. ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಸಾವಿರ ಕೋಟಿ ರೂ. ಒದಗಿಸಬೇಕು. ಬ್ರಾಂಡ್ ಹುಬ್ಬಳ್ಳಿ ಧಾರವಾಡ ಬೆಳಗಾವಿ ಪರಿಕಲ್ಪನೆ ಘೋಷಣೆ ಮಾಡಿ ಸ್ಪಷ್ಟ ಕ್ರಿಯಾ ಯೋಜನೆ ಮಾಡಬೇಕು ಎಂಬುದು ಸೇರಿದಂತೆ ಹಲವು ವಿಷಯಗಳನ್ನು ಸದನದಲ್ಲಿ ಟೆಂಗಿನಕಾಯಿ ಪ್ರಸ್ತಾಪಿಸಿದ್ದಾರೆ.