ಕ್ಯಾಸಿನೋ ಕಿಡ್ನಾಪ್​ ಹಿಂದಿದೆ ಭಾರಿ ರಹಸ್ಯ; ಗರೀಬ್​ ನಿಜಕ್ಕೂ ಗೆದ್ದಿದ್ದನಾ 11 ಕೋಟಿ ರೂ.?

Cassino arrest
Published on

ಕೇಶವಮೂತಿ೯ ವಿ.ಬಿ. ಹುಬ್ಬಳ್ಳಿ
ಆನ್​ಲೈನ್​ ಕ್ಯಾಸಿನೋ ಗೇಮ್​ನಲ್ಲಿ ಕೋಟ್ಯಂತರ ರೂಪಾಯಿ ಗೆದ್ದಿದ್ದ ಎನ್ನಲಾದ ನಗರದ ಇಂಜಿನಿಯರಿಂಗ್​ ವಿದ್ಯಾಥಿ೯ ಗರೀಬ್​ ನವಾಜ್​ನನ್ನು ಅಪಹರಿಸಿದ್ದ ಪ್ರಕರಣದ ಹಿಂದೆ ಹಲವು ರಹಸ್ಯಗಳು ಅಡಗಿವೆ. ಈ ಪ್ರಕರಣದ ಹಿಂದೆ ಗರೀಬ್​ ಸ್ನೇಹಿತ ಹಾಗೂ ಕಿಂಗ್​ಪಿನ್​ ಅಬ್ದುಲ್​ ಮುಚಾಲೆ ಕೈವಾಡ ಇರುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಅಪಹರಣಕ್ಕೀಡಾಗಿದ್ದ ನಗರದ ಮಂಟೂರ ರಸ್ತೆಯ ಗರೀಬ್​ ನವಾಜ್​, ಆರೋಪಿ ಅಬ್ದುಲ್​ ಮುಚಾಲೆ ಹಾಗೂ ತಾಳಿಕೋಟೆ ಮೂಲದ ದಿಲ್ವಾರ್​ ಹುಸೇನ್​ ಬಳಿಗಾರ ಮೂವರೂ ಸ್ನೇಹಿತರು. ದಿಲ್ವಾರ್​ ಕ್ಯಾಸಿನೋದಲ್ಲಿ ಮೇಲುಗೈ ಸಾಧಿಸಿ ಕೋಟ್ಯಂತರ ರೂ. ಗೆದ್ದಿದ್ದ. ಈತನ ಸಹಾಯದಿಂದ ಗರೀಬ್​ ಕ್ಯಾಸಿನೋ ಆನ್​ಲೈನ್​ ಗೇಮ್​ ಆಡಲು ಕಲಿತಿದ್ದ. ಆದರೆ, ಈತ ಹೆಚ್ಚು ಹಣ ಗೆದ್ದಿರಲಿಲ್ಲ. ಬದಲಾಗಿ ದಿಲ್ವಾರ್​ ಹೆಚ್ಚು ಹಣ ಗೆದ್ದಿದ್ದ. ಅದರಲ್ಲಿ ಕೋಟ್ಯಂತರ ರೂ. ಅನ್ನು ಅಬ್ದುಲ್​ ಹಾಗೂ ಗರೀಬ್​ ಹೆಸರಿನ ಖಾತೆಗಳ ಮೂಲಕ ಚಲಾವಣೆ ಮಾಡಿಕೊಂಡಿದ್ದ.
ಅಬ್ದುಲ್​ ಖಾತೆಗೆ ದಿಲ್ವಾರ್​ ಸುಮಾರು ಒಂದೂವರೆ ಕೋಟಿ ರೂ. ವರ್ಗಾಯಿಸಿದ್ದ. ಇದರಲ್ಲಿ ಸ್ವಲ್ಪ ಹಣವನ್ನು ಅಬ್ದುಲ್​ನು ದಿಲ್ವಾರ್​ನಿಗೆ ವಾಪಸ್​ ಕೊಟ್ಟಿದ್ದ. ಉಳಿದ ಹಣದಲ್ಲಿ ಮೋಜು, ಮಸ್ತಿ ಮಾಡಿದ್ದ. ಈ ವಿಷಯ ಗೊತ್ತಾದ ಬಳಿಕ ದಿಲ್ವಾರ್​ನು ಅಬ್ದುಲ್​ನಿಂದ ದೂರವಾಗಿದ್ದ. ಗರೀಬ್​ನಿಗೆ ಮತ್ತಷ್ಟು ಹತ್ತಿರವಾಗಿದ್ದ.
ಈ ನಡುವೆ ಅಬ್ದುಲ್​ ಬಳಿ ಕೋಟ್ಯಂತರ ರೂ. ಇರುವುದು ಆರೀ್​ ದಾಸ್ತಿಕೊಪ್ಪನಿಗೆ ಗೊತ್ತಾಗುತ್ತದೆ. ತುರ್ತಾಗಿ 5 ಲಕ್ಷ ರೂ. ಕೊಡುವಂತೆ ಆರೀ್​ನು ಅಬ್ದುಲ್​ಗೆ ಕೇಳುತ್ತಾನೆ. ಉಪಾಯ ಮಾಡಿದ ಅಬ್ದುಲ್​ ಕಥೆ ಕಟ್ಟುತ್ತಾನೆ. ನನ್ನ ಬಳಿ ಹಣ ಇಲ್ಲ. ಗರೀಬ್​ ಬಳಿ ದಿಲ್ವಾರ್​ನ ಕೋಟ್ಯಂತರ ರೂ. ಇದೆ. ಆತನನ್ನು ಅಪಹರಿಸೋಣ ಎಂದು ಹೊಂಚು ಹಾಕುತ್ತಾನೆ. ತನ್ನ ಜತೆ ಆರು ಜನರನ್ನು ಸೇರಿಸಿಕೊಳ್ಳುತ್ತಾನೆ. ಗರೀಬ್​ನನ್ನು ಗೋಕುಲ ರಸ್ತೆಯ ಡೆಕಥ್ಲಾನ್​ ಬಳಿ ಕರೆಸಿಕೊಂಡು ಅಪಹರಿಸುತ್ತಾರೆ.
ಒಟ್ಟಾರೆ ಈ ಪ್ರಕರಣದಲ್ಲಿ ಕೋಟ್ಯಂತರ ರೂ. ಹಣ ಚಲಾವಣೆಯಾಗಿರುವುದು ಸ್ಪಷ್ಟವಾಗುತ್ತಿದೆ. ಆದರೆ, ಅಷ್ಟೂ ಹಣ ಗೇಮ್​ನಿಂದಲೇ ಬಂದಿತ್ತಾ, ಬೇರೆ ಯಾವುದಾದರೂ ಮೂಲ ಇದೆಯಾ ? ಅಪಹರಣಕ್ಕೆ ಬೇರೆ ಯಾವುದಾದರೂ ಕಾರಣ ಇತ್ತಾ ? ಎಂಬಿತ್ಯಾದಿ ಮಹತ್ವದ ಅಂಶಗಳು ಪೊಲೀಸ್​ ತನಿಖೆಯಿಂದ ಹೊರಬರಬೇಕಿದೆ.
ರ್ಯಾಂಕ್​ ಸ್ಟೂಡೆಂಟ್​ ದಿಲ್ವಾರ್​
ಅಪಹರಣಕ್ಕೀಡಾಗಿದ್ದ ಗರೀಬ್​ ನವಾಜ್​, ಗೇಮ್​ನಲ್ಲಿ ಕೋಟ್ಯಂತರ ರೂ. ಗೆದ್ದಿದ್ದ ದಿಲ್ವಾರ್​ ಹಾಗೂ ಬಾಲಿ ಎಂಬುವರು ರಾಷ್ಟ್ರೀಯ ವಾಲಿಬಾಲ್​ ಪಟುಗಳು. ದಿಲ್ವಾರ್​ ಅತಿ ಬುದ್ದಿವಂತನಾಗಿದ್ದ ಕ್ಯಾಸಿನೋ ಗೇಮ್​ನಲ್ಲಿ ಕೋಟ್ಯಂತರ ರೂ. ಗಳಿಸಿದ್ದ. ಅಲ್ಲದೇ ಇತ್ತೀಚೆಗೆ ನಡೆದ ನೀಟ್​ ಪರೀೆಯಲ್ಲಿ 218ನೇ ರ್ಯಾಂಕ್​ ಕೂಡ ಪಡೆದಿದ್ದಾನೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.
18 ಲಕ್ಷ ಕಿಟ್​ ಹಂಚಿದ್ದ
ಕೋಟ್ಯಂತರ ರೂ. ತನ್ನ ಖಾತೆಗೆ ಬಂದ ಬಳಿಕ ಅಬ್ದುಲ್​ ಸ್ನೇಹಿತರೊಂದಿಗೆ ಸೇರಿ ಮೋಜು ಮಸ್ತಿ ಮಾಡಿದ್ದ. ಜತೆಗೆ 18 ಲಕ್ಷ ರೂ. ಮೌಲ್ಯದ ಆಹಾರದ ಕಿಟ್​ ಗಳನ್ನು ಬಡವರಿಗೆ ಹಂಚಿದ್ದ. ಕೆಲ ಧಾಮಿರ್ಕ ಕೇಂದ್ರಗಳಿಗೂ ದೇಣಿಗೆ ನೀಡಿದ್ದ ಎಂದು ಪೊಲೀಸ್​ ತನಿಖೆಯಲ್ಲಿ ಗೊತ್ತಾಗಿದೆ.
ಕೋಟ್​:
ಆರೋಪಿತರು ಹಾಗೂ ಅಪಹರಣಕ್ಕೀಡಾಗಿದ್ದ ಯುವಕ ಆನ್​ಲೈನ್​ ಕ್ಯಾಸಿನೋ ಗೇಮ್​ನಿಂದ ಕೋಟ್ಯಂತರ ರೂ. ಗೆದ್ದಿದ್ದರೋ ಇಲ್ಲವೋ ಎಂಬ ಬಗ್ಗೆ ತನಿಖೆ ನಂತರ ಸ್ಪಷ್ಟವಾಗಿ ತಿಳಿಯಲಿದೆ.

ಲಾಭೂರಾಮ, ಪೊಲೀಸ್​ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net