

ಹುಬ್ಬಳ್ಳಿ: ಮಾನಸಿಕ ಕಾಯಿಲೆಗೆ ಒಳಗಾಗಿದ್ದ ಯುವಕನೊಬ್ಬ ಹೆತ್ತ ತಂದೆಯ ಎದುರಲ್ಲೇ ಕೆರೆಗೆ ಹಾರಿದ ಧಾರುಣ ಟನೆ ಇಲ್ಲಿನ ಉಣಕಲ್ ಕೆರೆಯಲ್ಲಿ ಮಂಗಳವಾರ ನಡೆದಿದೆ.
ಉಣಕಲ್ ನಿವಾಸಿ ಪ್ರಶಾಂತ ದೇವೇಂದ್ರಪ್ಪ ಬಾರದ್ವಾಡ (22) ಆತ್ಮಹತ್ಯೆ ಮಾಡಿಕೊಂಡವ. ಪ್ರಶಾಂತ ಮಂಗಳವಾರ ಬೆಳಗ್ಗೆ ಮನೆಯಿಂದ ಓಡಿ ಕೆರೆ ಬಳಿ ಬಂದ. ಈತನನ್ನೇ ಹಿಂಬಾಲಿಸಿಕೊಂಡು ತಂದೆ ದೇವೇಂದ್ರಪ್ಪ ಬಂದರು. ಉಳವಿ ಚನ್ನಬಸವೇಶ್ವರ ದೇವಸ್ಥಾನದ ಹಿಂದಿನಿಂದ ಕೆರೆಗೆ ಹಾರಲು ಮುಂದಾಗಿದ್ದ.
ತಂದೆ ದೇವೇಂದ್ರಪ್ಪ ಅವರು "ಕೈ ಮುಗಿಯುತ್ತೇನೆ ಕೆರೆಗೆ ಹಾರಬೇಡ ಮಗನೇ' ಎಂದು ಮನವಿ ಮಾಡಿದರೂ ಲೆಕ್ಕಿಸದೇ ಪ್ರಶಾಂತ ಕೆರೆಗೆ ಹಾರಿದ್ದ. ಕೂಡಲೇ ಅಕ್ಕಪಕ್ಕದವರನ್ನು ಸಹಾಯಕ್ಕೆಂದು ಕೂಗಿದ್ದರು. ಮೂರ್ನಾಲ್ಕು ಜನ ಕೆರೆಗೆ ಹಾರಿ ಆತನನ್ನು ಹುಡುಕಲು ಮುಂದಾದರೂ ಪತ್ತೆಯಾಗಲಿಲ್ಲ. ಬಳಿಕ ವಿದ್ಯಾನಗರ ಠಾಣೆ ಪೊಲೀಸರು, ಅಗ್ನಿಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಹುಡುಕಾಟ ಆರಂಭಿಸಿದರು. ಸಂಜೆ ವೇಳೆ ಮೃತದೇಹ ಪತ್ತೆಯಾಯಿತು. ಪ್ರಶಾಂತ ಮಾನಸಿಕ ಕಾಯಿಲೆಗೆ ತುತ್ತಾಗಿದ್ದ. ಸೋಮವಾರವಷ್ಟೇ ಈತನಿಗೆ ಪಾಲಕರು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದರು ಎಂದು ಪ್ರಕರಣ ದಾಖಲಿಸಿಕೊಂಡಿರುವ ವಿದ್ಯಾನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.