

ಕಾರವಾರ:ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಹಲವು ದಶಕಗಳಿಂದ ಇದ್ದ ಅಡೆತಡೆ ತೆರವಾಗಿದ್ದು, ಶೀಘ್ರ ಯೋಜನೆ ಜಾರಿಯಾಗುವ ನಿರೀಕ್ಷೆ ಇದೆ ಎಂದು ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ, ಕೈಗಾರಿಕೆಗೆ ದೊಡ್ಡ ಪ್ರಮಾಣದಲ್ಲಿ ಅನುಕೂಲವಾಗುವ ನಿರೀಕ್ಷೆ ಇದೆ ಎಂದರು.
ಸೇವಾ ಸಮಿತಿಯ ಕರ್ಯರ್ಶಿ ರಾಜೀವ ಗಾಂವಕರ್ ಮಾತನಾಡಿ, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ 2000 ನೇ ಇಸವಿಯಲ್ಲಿ ಶಂಕುಸ್ಥಾಪನೆಯಾಗಿತ್ತು. ಕಾಮಗಾರಿಯೂ ಪ್ರಾರಂಭವಾಗಿತ್ತು.
ಆದರೆ, 2001 ರಲ್ಲಿ ಯೋಜನೆ ವಿರೋಧಿಸಿ ಶಿರಸಿಯ ಪಾಂಡುರಂಗ ಹೆಗಡೆ ನ್ಯಾಯಾಲಯದಲ್ಲಿ ಪರಿಸರ ವಾಯಿದೆ ಹಾಕಿದ್ದರು. ಇದರಿಂದ ಯೋಜನೆಗೆ 19 ವರ್ಷ ವಿಳಂಬವಾಯಿತು.
ವಿವಿಧ ನ್ಯಾಯಾಲಯಗಳ ತೀರ್ಪಿನ ಬಳಿಕ 2020 ರ ಮಾರ್ಚ್ 20 ರಂದು ರಾಜ್ಯ ವನ್ಯಜೀವಿ ಮಂಡಳಿಯು ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಅನುಮೋದನೆ ನೀಡಿತ್ತು.
ಆದರೆ, ಮಂಡಳಿಯ ಅನುಮೋದನೆ ಪ್ರಶ್ನಿಸಿ ಬೆಂಗಳೂರಿನ ವೃಕ್ಷಾ ಫೌಂಡೇಶನ್ ಎಂಬ ಸಂಘಟನೆ ಹೈಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯಕ್ಕೆ ಕೆಲವು ತಪ್ಪು ಮಾಹಿತಿ ನೀಡಿ, ಮಂಡಳಿಯ ಅನುಮತಿಗೆ ತಡೆಯಾಜ್ಞೆ ತಂದಿತ್ತು.
2021 ರ ಡಿಸೆಂಬರ್ ನಲ್ಲಿ ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿಯು ಈ ತಡೆಯಾಜ್ಞೆ ತೆರವು ಮಾಡುವಂತೆ ಹೈಕೋರ್ಟ್ ಮೊರೆ ಹೋಗಿತ್ತು. ರವೀಂದ್ರ ಕೊಲ್ಲೆ ಹಾಗೂ ಅಕ್ಷಯ ಕೊಲ್ಲೆ ಸಮಿತಿಯ ಪರವಾಗಿ ವಾದ ಮಂಡಿಸಿದ್ದರು.
ಹೈಕೋರ್ಟ್ ವಿಚಾರಣೆ ನಡೆಸಿ ತಜ್ಞರ ಸಮಿತಿಯೊಂದನ್ನು ರಚಿಸಿ ಅಧ್ಯಯನ ಕೈಗೊಂಡು ವರದಿ ನೀಡುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ನಿರ್ದೇಶಿಸಿತ್ತು.
ಅದರಂತೆ ವನ್ಯಜೀವಿ ಮಂಡಳಿಯಿಂದ ನೇಮಕವಾದ ತಜ್ಞರ ಸಮಿತಿ ಸ್ಥಳ ಪರಿಶೀಲನೆ ನಡೆಸಿ, ಸಾರ್ವಜನಿಕರ ಅಭಿಪ್ರಾಯ ಪಡೆದು, ವರದಿಯೊಂದನ್ನು ವನ್ಯಜೀವಿ ಮಂಡಳಿಗೆ ನೀಡಿತ್ತು. ಮಂಡಳಿಯು ಹೈಕೋರ್ಟ್ಗೆ ವರದಿ ನೀಡಿತ್ತು.
ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣ ಮಾಡಲಿರುವ ನೈರುತ್ಯ ರೈಲ್ವೆಗೆ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಪುನಃ ಪರಿಸರ ಅನುಮತಿಗೆ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿತ್ತು.
ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ದ್ವಿಪಥ ಮಾಡುವ ಸಂಬಂಧ ಅಧ್ಯಯನ ಮಾಡಿ, ಸಾಧ್ಯವಾದಷ್ಟು ಸದ್ಯ ಇರುವ ರಾಷ್ಟ್ರೀಯ ಹೆದ್ದಾರಿ 63 ರ ಪಕ್ಕದಲ್ಲೇ ಹಳಿ ನಿರ್ಮಿಸಿ. ಯೋಜನೆಗೆ ಸಂಬಂಧಪಟ್ಟ ಎನ್ಎಚ್ಎಐ, ಅರಣ್ಯ ಹಾಗೂ ಇತರ ಎಲ್ಲ ಸಂಘಟನೆಗಳು ಒಟ್ಟಾಗಿ ಕುಳಿತು ಪರಿಷ್ಕೃತ ಯೋಜನೆ ತಯಾರಿಸಿ ಹೊಸದಾಗಿ ಪರಿಸರ ಅನುಮೋದನೆ ಪಡೆಯಿರಿ ಎಂದು ರಾಷ್ಟ್ರೀಯ ವನ್ಯಜೀವಿ ಮಂಡಳಿ ಶಿಫಾರಸು ಮಾಡಿದೆ.
ಮಂಡಳಿ ಮಾಡಿದ ಎಲ್ಲ ಶಿಫಾರಸುಗಳನ್ನು ಪಾಲಿಸುವುದಾಗಿ ನೈರುತ್ಯ ರೈಲ್ವೆ ಇತ್ತೀಚೆಗೆ ಹೈಕೋರ್ಟ್ಗೆ ಅಫಿಡವಿಟ್ ನೀಡಿದೆ. ಎಲ್ಲದರ ಪರಿಣಾಮ ಹೈಕೋರ್ಟ್ ವೃಕ್ಷಾ ಫೌಂಡೆಶನ್ ದಾವೆಯನ್ನು ತಳ್ಳಿ ಹಾಕಿದೆ.
ಇದರಿಂದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಇದ್ದ ತಡೆಯಾಜ್ಞೆಯೂ ತೆರವಾಗಿದೆ. ಎಂದು ಸುಧೀರ್ಘ ಹೋರಾಟದ ವಿವರ ನೀಡಿದರು.
ಹೋರಾಟಕ್ಕೆ ಎಲ್ಲ ರಾಜಕೀಯ ಪಕ್ಷದವರು, ನಾಯಕರು ನಮಗೆ ಸಹಕಾರ ನೀಡಿದ್ದರು ಅವರನ್ನು ಅಭಿನಂದಿಸುತ್ತೇವೆ ಎಂದರು.
ಸಮಿತಿಯ ಉಪಾಧ್ಯಕ್ಷ ವೆಂಟು ಮಾಸ್ತರ ಶಿಳ್ಯ, ಸಮಿತಿಯು ಎಲ್ಲ ರೈಲ್ವೆ ನಿಲ್ದಾಣಗಳಿಗೆ ಮೂಲ ಸೌಕರ್ಯ ಒದಗಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದರು. ಮಹೇಶ ಗೂಳಿಕಟ್ಟಿ ಇದ್ದರು.