

ಹುಬ್ಬಳ್ಳಿ : ವಿಮಾನ ನಿಲ್ದಾಣದ ಟರ್ವಿುನಲ್ ಕಟ್ಟಡ ಸೇರಿದಂತೆ ಇತರ ಸೌಲಭ್ಯಗಳ ಬೃಹತ್ ಸುಧಾರಣೆ ಕಾರ್ಯಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪ್ರಸ್ತಾವನೆಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ, ಹುಬ್ಬಳ್ಳಿ ವಿಮಾನ ನಿಲ್ದಾಣ ಟರ್ವಿುನಲ್ ವಿಸ್ತರಣೆಗೆ 273 ಕೋಟಿ ರೂ. ಬಿಡುಗಡೆ ಮಾಡಿದೆ.
ಈ ಕುರಿತು ಪ್ರಕಟಣೆ ನೀಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಹುಬ್ಬಳ್ಳಿ-ಧಾರವಾಡ ರಾಜ್ಯದ 2ನೇ ಅತಿ ದೊಡ್ಡ ಮಹಾನಗರವಾಗಿದೆ. ಧಾರವಾಡದಲ್ಲಿ ಐಐಐಟಿ ಹಾಗೂ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಂತಹ ಬೃಹತ್ ಸಂಸ್ಥೆಗಳ ಕಾರ್ಯಾರಂಭ ಹಾಗೂ ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ನಾನು ಈಗಿರುವ ಟರ್ವಿುನಲ್ ಕಟ್ಟಡದ ವಿಸ್ತೀರ್ಣ, ರನ್ವೇ ವಿಸ್ತೀರ್ಣ, ಅಪ್ರಾನ್ ವಿಸ್ತೀರ್ಣ ಹಾಗೂ ಕಾಗೋ ನಿರ್ವಹಣಾ ಸುಧಾರಣೆ ಮುಂತಾದ ಕಾರ್ಯಗಳನ್ನು ಕೈಗೊಳ್ಳಲು ಕೇಂದ್ರ ನಾಗರೀಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಕಳೆದ ತಿಂಗಳಷ್ಟೇ ಪತ್ರ ಬರೆದಿದ್ದಾಗಿ ತಿಳಿಸಿದ್ದಾರೆ.
ನೂತನ ಯೋಜನೆಯಂತೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ವಿುನಲ್ 20,000 ಚ.ಮೀ. ವಿಸ್ತರಣೆಗೊಳ್ಳಲಿದೆ. ಏಕಕಾಲಕ್ಕೆ 1,400 ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಲಿದೆ. ವಿಸ್ತರಣೆ ಕಾಮಗಾರಿ ಜನವರಿಯಲ್ಲಿ ಆರಂಭವಾಗಲಿದ್ದು, ಎರಡು ವರ್ಷಗಳಲ್ಲಿ ಪ್ರಯಾಣಿಕರ ಉಪಯೋಗಕ್ಕೆ ಮುಕ್ತವಾಗಿಸುವ ಗುರಿ ಹೋದಲಾಗಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.
ಈ ಬೃಹತ್ ವಿಮಾನ ನಿಲ್ದಾಣದ ಸುಧಾರಣೆಗೆ ಹಾಗೂ ಉನ್ನತೀಕರಣ ಕಾರ್ಯ ಪೂರ್ಣಗೊಂಡಾಗ ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ದಾರಿಯಾಗುವುದು. ಅದುವರೆಗೆ ದೇಶದ ಇತರ ಮಹತ್ವದ ನಗರಗಳಿಗೆ ವಿಮಾನಗಳ ಆರಂಭಕ್ಕೂ ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ. ಈ ಸುಧಾರಣೆಯಿಂದ ಇಡಿ ಉತ್ತರ ಕರ್ನಾಟಕದ ಉದ್ದಿಮೆ, ಕೈಗಾರಿಕೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಬೆಳವಣಿಗೆಗೂ ಸಹಾಯವಾಗಲಿದೆ ಎಂದು ಹೇಳಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದ ಈಗಿನ 3,600 ಚದರ ಮೀಟರ್ ಗಾತ್ರದ ಟರ್ವಿುನಲ್ ಕಟ್ಟಡ ಸಧ್ಯ ಪ್ರತಿ ವರ್ಷ 5 ಲಕ್ಷ ಪ್ರಯಾಣಿಕರ ನಿರ್ವಹಣೆಯ ಒಂದೇ ಸಮಯಕ್ಕೆ 300 ಪ್ರಯಾಣಿಕರಂತೆ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ ಇಪ್ಪತ್ತು ಸಾವಿರ ಚೌರಸ ಮೀಟರ್ ಗಾತ್ರದ 1,400 ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯದ 3 ಏರೋಬ್ರಿಜ್ ಸೇರಿದಂತೆ ಎಲ್ಲ ಆಧುನಿಕ ಸೌಲಭ್ಯಗಳೊಂದಿಗೆ ಪರಿವರ್ತಿಸುವ ಯೋಜನೆ, ಈಗಿನ 2600/45 ಮಿ. ಗಾತ್ರದ ರನ್ವೇ ಹೆಚ್ಚಳ ಹಾಗೂ ಈಗಿರುವ ಅಪ್ರಾನ್ ಗಾತ್ರದ ಹೆಚ್ಚಳ ಸೇರಿದಂತೆ ಸಮಗ್ರವಾಗಿ ನಿಲ್ದಾಣದ ಅಭಿವೃದ್ಧಿ ಮಾಡಲಾಗುವುದೆಂದು ಸಚಿವ ಜೋಶಿ ವಿವರಿಸಿದ್ದಾರೆ.