ಹುಬ್ಬಳ್ಳಿ ವಿಮಾನ ನಿಲ್ದಾಣ ಉನ್ನತಿಕರಣ, ಸಚಿವ ಜೋಶಿ ನೇತೃತ್ವದಲ್ಲಿ ಮಹತ್ವದ ಸಭೆ

IMG-20230703-WA0013-1.jpg
Published on

ಹುಬ್ಬಳ್ಳಿ: ಕೇಂದ್ರ ಸರ್ಕಾರ ಹುಬ್ಬಳ್ಳಿ ವಿಮಾನ ನಿಲ್ದಾಣ ಟರ್ಮಿನಲ್ ವಿಸ್ತರಣೆಗೆ 273 ಕೋಟಿ ರೂ. ಬಿಡುಗಡೆ ಮಾಡಿದ್ದು, ನಿಲ್ದಾಣವು ಮತ್ತಷ್ಟು ಮೇಲ್ದರ್ಜೆಗೆ ಏರಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಟರ್ಮಿನಲ್ ಕಟ್ಟಡ ಸೇರಿ ಇತರ ಸೌಲಭ್ಯಗಳ ಸುಧಾರಣೆ ಕಾರ್ಯಕ್ಕೆ ತಾವು ಪ್ರಸ್ತಾವನೆ ಸಲ್ಲಿಸಿದ ನಂತರ ಕೇಂದ್ರ ಸರ್ಕಾರ ಸ್ಪಂದಿಸಿದೆ. ಅದರಂತೆ ಹಣ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ನಿಲ್ದಾಣದ ಉನ್ನತಿಕರಣಕ್ಕಾಗಿ ಅಧಿಕಾರಿಗಳ ಸಭೆ ನಡೆಸಿ ಸಲಹೆ ಸೂಚನೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹುಬ್ಬಳ್ಳಿ- ಧಾರವಾಡ ರಾಜ್ಯದ 2ನೇ ಅತೀ ದೊಡ್ಡ ನಗರವಾಗಿದ್ದು, ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಚಿವರು ಈಗಿರುವ ಟರ್ಮಿನಲ್ ಕಟ್ಟಡದ ವಿಸ್ತೀರ್ಣ, ರನ್ ವೇ ವಿಸ್ತೀರ್ಣ, ಆಪಾನ್ ಹಾಗೂ ಕಾಗೋರ್ ನಿರ್ವಹಣೆ ಸುಧಾರಣೆ ಮುಂತಾದ ಕಾರ್ಯ ಕೈಗೊಳ್ಳಲು ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಕಳೆದ ತಿಂಗಳು ಪತ್ರ ಬರೆದಿದ್ದರು.

ಹುಬ್ಬಳ್ಳಿ ವಿಮಾನ ನಿಲ್ದಾಣದ ಎಲ್ಲ ಸುಧಾರಣೆಗೆ ಪ್ರಸ್ತಾವನೆಯನ್ನು ತೀವ್ರ ಪರಿಶೀಲನೆ ನಡೆಸಿದ ಸಚಿವರು ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ ಎಂದು ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೂತನ ಯೋಜನೆಯಂತೆ ಹುಬ್ಬಳ್ಳಿ ವಿಮಾನ ನಿಲ್ದಾಣದ ರ್ಟಮಿನಲ್ 20 ಸಾವಿರ ಚ.ಮೀ. ವಿಸ್ತರಣೆಗೊಳ್ಳಲಿದ್ದು, ಏಕಕಾಲಕ್ಕೆ 1400ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಲಿದೆ ಎಂದೂ ತಿಳಿಸಿದ್ದಾರೆ.

ಕೇಂದ್ರ ಸಚಿವ ಜೋಶಿ ಅವರೊಂದಿಗೆ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದಕುಮಾರ್ ಠಾಕ್ರೆ ಮತ್ತು ಇತರ ಅಧಿಕಾರಿಗಳು, ವಿಮಾನ ನಿಲ್ದಾಣ ಸಲಹಾ ಸಮಿತಿ ಸದಸ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net