ಯುಪಿಎಸ್​ಸಿ ಪರೀಕ್ಷೆಯಲ್ಲಿ ಸಾಧನೆ

krupa jain
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್​ಸಿ) ನಡೆಸಿದ 2023ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಹುಬ್ಬಳ್ಳಿಯ ಕೃಪಾ ಅಭಯ ಜೈನ್ 440ನೇ ರ್ಯಾಂಕ್ ಪಡೆದಿದ್ದಾರೆ.

ಹುಬ್ಬಳ್ಳಿ ವಿಶ್ವೇಶ್ವರನಗರ ನಿವಾಸಿಯಾಗಿರುವ ಕೃಪಾ, 3ನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ್ದಾರೆ. 2ನೇ ಪ್ರಯತ್ನದಲ್ಲಿ ಅವರು ಮೀಸಲು ಪಟ್ಟಿಯಲ್ಲಿ ಇದ್ದರು. ಇಂಡಿಯನ್ ರೈಲ್ವೆ ಮ್ಯಾನೇಜಮೆಂಟ್ ಸರ್ವಿಸ್ (ಐಆರ್​ಎಂಎಸ್)ಗೆ ಆಯ್ಕೆಯಾಗಿ ಲಕ್ನೋದಲ್ಲಿ ಸೇವೆಗೆ ಸೇರಿದ್ದರು. ಹೆಚ್ಚಿನ ರ್ಯಾಂಕ್ ಪಡೆಯುವ ಉದ್ದೇಶದಿಂದ ಮತ್ತೊಮ್ಮೆ ನಾಗರಿಕ ಸೇವಾ ಪರೀಕ್ಷೆ ಎದುರಿಸಿದ್ದರು.

ಯಾವುದೇ ತರಬೇತಿ ಪಡೆಯದೆ ಸ್ವಂತ ಅಧ್ಯಯನದಿಂದ ಅವರು ಈ ಸಾಧನೆ ಮಾಡಿದ್ದಾಗಿ ತಿಳಿಸಿದ್ದಾರೆ.

ಹುಬ್ಬಳ್ಳಿ ಪ್ರೇರಣಾ ಕಾಲೇಜ್​ನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದ ಕೃಪಾ ಜೈನ್, ಶೇ. 97.83 (587 ಅಂಕಗಳು) ರಷ್ಟು ಫಲಿತಾಂಶದೊಂದಿಗೆ ಧಾರವಾಡ ಜಿಲ್ಲೆಗೆ ಟಾಪರ್ ಆಗಿದ್ದರು. ಬಳಿಕ ಬೆಂಗಳೂರಿನ ಆರ್​ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್​ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಸಿಸ್ಕೊ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು.

‘ನಾಗರಿಕ ಸೇವಾ ಪರೀಕ್ಷೆಯಲ್ಲಿ ಮಗಳು 440ನೇ ರ್ಯಾಂಕ್ ಪಡೆದಿರುವುದು ಖುಷಿ ತಂದಿದೆ. ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ ತೇರ್ಗಡೆಯಾಗಿದ್ದಳು. 2ನೇ ಪ್ರಯತ್ನದಲ್ಲಿ ರ್ಯಾಂಕ್ ಬಂದಿರಲಿಲ್ಲ, ಮೀಸಲು ಪಟ್ಟಿಯಲ್ಲಿ ಇದ್ದಳು. ಲಕ್ನೋದಲ್ಲಿ ರೈಲ್ವೆ ಇಲಾಖೆಗೆ ಸೇರಿದ್ದಳು. ಅಲ್ಲಿ ಒಂದು ವರ್ಷ ರಜೆ ಪಡೆದು, ಸ್ವ ಅಧ್ಯಯನದ ಮೂಲಕ ಈ ಬಾರಿ 440ನೇ ರ್ಯಾಂಕ್ ಪಡೆದಿದ್ದಾಳೆ. ಕೋಚಿಂಗ್ ಪಡೆಯದೇ ರ್ಯಾಂಕ್ ಬಂದಿರುವುದು ನಮಗೆ ಹೆಮ್ಮೆಯ ಸಂಗತಿ’ ಎಂದು ಕೃಪಾ ತಂದೆ ಅಭಯ ಜೈನ್ ಹರ್ಷ ವ್ಯಕ್ತಪಡಿಸಿದ್ದಾರೆ.

‘ನಾನು ಮೊದಲ ಎರಡು ಪ್ರಯತ್ನದಲ್ಲಿ ವಿಫಲವಾದರೂ ಧೃತಿಗೆಡಲಿಲ್ಲ. ಪುನಃ ಪ್ರಯತ್ನ ಮಾಡಿದೆ. ಫಲ ದೊರೆಯಿತು. ಯಶಸ್ಸು ಗಳಿಸಲು ಕಠಿಣ ಪರಿಶ್ರಮ ಹಾಗೂ ತಾಳ್ಮೆ ಬಹಳ ಮುಖ್ಯವಾಗುತ್ತದೆ. ಯುಪಿಎಸ್​ಸಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದಿ ಅರ್ಥ ಮಾಡಿಕೊಳ್ಳುತ್ತಿದ್ದೆ. ನಿತ್ಯ ಪತ್ರಿಕೆಗಳನ್ನು ಓದುತ್ತಿದ್ದೆ. ತಂದೆ-ತಾಯಿ ತುಂಬಾ ಸಹಕಾರ ನೀಡಿದ್ದಾರೆ’ ಎಂದು ಕೃಪಾ ಜೈನ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net