ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಿರಿ

16-child workshop
Published on

ಹುಬ್ಬಳ್ಳಿ: ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟುವುದು ಪಾಲಕರು, ಶಿಕ್ಷಕರು ಮತ್ತು ಸಮಾಜದ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಬೆಂಗಳೂರಿನ ಮುಕ್ತ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕಿ, ಮನಶಾಸ್ತ್ರಜ್ಞೆ ಡಾ. ಅಶ್ವಿನಿ ಎನ್.ವಿ. ಹೇಳಿದರು.

ನಗರದ ಬೆಂಗೇರಿ ಸಂತೆ ಮಾರುಕಟ್ಟೆ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಜನಜಾಗೃತಿ ಮೂಡಿಸುವ ‘ಶಿಕ್ಷಕರಿಗೆ ತರಬೇತಿ ನೀಡಿ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮಕ್ಕಳು ಇಂದು ಅನೇಕ ರೀತಿಯ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ. ಅವುಗಳನ್ನು ಪಾಲಕರು ಮತ್ತು ಶಿಕ್ಷಕರು ಯಾವ ರೀತಿ ಗುರುತಿಸಬೇಕು. ದೌರ್ಜನ್ಯಗಳಿಗೆ ಒಳಗಾಗದಂತೆ ಯಾವ ರೀತಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬುದನ್ನು ಶಿಕ್ಷಕರಿಗೆ ವಿವರಿಸಿದರು.

ಯಂಗ್ ಇಂಡಿಯನ್ಸ್ ಸಂಸ್ಥೆಯ ದಕ್ಷಿಣ ಭಾರತದ ಚೇರ್ಮನ್ ಡಾ. ಶ್ರೀನಿವಾಸ ಜೋಶಿ ಮಾತನಾಡಿ, ಯಂಗ್ ಇಂಡಿಯನ್ಸ್ ವತಿಯಿಂದ ಹಲವಾರು ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿದ್ದೇವೆ. ಸದ್ಯ ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ಕುರಿತು ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚು ಶಿಕ್ಷಕರನ್ನು ಸೇರಿಸಿ ಗಿನ್ನೆಸ್ ದಾಖಲೆ ನಿರ್ವಿುಸುವ ಗುರಿ ಹೊಂದಿದ್ದೇವೆ ಎಂದರು.

ಖ್ಯಾತ ಉದ್ಯಮಿ ತಿಲಕ ವಿಕಮಸಿ ಮಾತನಾಡಿ, ಮಕ್ಕಳ ಸುರಕ್ಷತೆಗಾಗಿ ಯಂಗ್ ಇಂಡಿಯನ್ಸ್ ಕೈಗೊಂಡಿರುವ ಈ ಮಹತ್ವದ ಕಾರ್ಯಕ್ರಮಕ್ಕೆ ನಾವೂ ಕೈ ಜೋಡಿಸುತ್ತೇವೆ ಎಂದರು.

ಮಜೇಥಿಯಾ ಫೌಂಡೇಷನ್ ಅಧ್ಯಕ್ಷ ಜಿತೇಂದ್ರ ಮಜೇಥಿಯಾ ಮಾತನಾಡಿ, ಯಂಗ್ ಇಂಡಿಯನ್ಸ್ ಸಂಸ್ಥೆಯು ಮಕ್ಕಳ ಸುರಕ್ಷತೆ ಕುರಿತು ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು, ಸಂಸ್ಥೆಯ ಈ ಸಾಮಾಜಿಕ ಕಾರ್ಯಗಳಿಗೆ ನಮ್ಮ ಫೌಂಡೇಷನ್ ವತಿಯಿಂದ ಲ್ಲ ರೀತಿಯ ಸಹಾಯ, ಸಹಕಾರ ನೀಡುವುದಾಗಿ ತಿಳಿಸಿದರು.

ಡಿಡಿಪಿಐ ಎಸ್.ಎಸ್. ಕೆಳದಿಮಠ ಮಾತನಾಡಿ, ಮಕ್ಕಳು ಮನೆಯಲ್ಲಿ ತಂದೆ-ತಾಯಿಗಿಂದ ಶಿಕ್ಷಕರ ಮಾತನ್ನು ಬೇಗ ಕೇಳುತ್ತಾರೆ. ಶಾಲೆಯಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಮಕ್ಕಳಿಗೆ ಏನಾದರೂ ಸಮಸ್ಯೆ ಇದ್ದರೆ ಸಮಾಧಾನದಿಂದ ಆಲಿಸಿ, ಪರಿಹಾರ ಒದಗಿಸಬೇಕು. ಕಾರ್ಯಾಗಾರದಲ್ಲಿ ಭಾಗವಹಿಸಿರುವ ಶಿಕ್ಷಕರು ಇಲ್ಲಿ ತಿಳಿಸಿದ ಮಾಹಿತಿಯನ್ನು ಇತರ ಶಿಕ್ಷಕರಿಗೆ ತಿಳಿಸಬೇಕು. ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ಕುರಿತು ಶಾಲೆಗಳಲ್ಲಿ 15 ದಿನಗಳಿಗೊಮ್ಮೆ ಕಾರ್ಯಕ್ರಮ ಆಯೋಜಿಸಿ 2025ರ ಮಾರ್ಚ್ ಅಂತ್ಯಕ್ಕೆ ಇಲಾಖೆಗೆ ವರದಿ ಸಲ್ಲಿಸಬೇಕು ಎಂದರು.

ಯಂಗ್ ಇಂಡಿಯಾ ಹು-ಧಾ ಶಾಖೆ ಚೇರ್ಮನ್ ಡಾ. ನಾಗರಾಜ ನಾಯಕ, ಸಹ ಚೇರ್ಮನ್ ರಾಹುಲ್ ಸುರಾನಾ ಮಾತನಾಡಿ, ಜಿಲ್ಲೆಯ 1500ಕ್ಕೂ ಅಧಿಕ ಶಾಲೆಗಳ 3,400 ಶಿಕ್ಷಕರು ಭಾಗವಹಿಸಿರುವುದು ಖುಷಿ ತಂದಿದೆ ಎಂದರು. ಮಾಸೂಮ್ ಹು-ಧಾ ಶಾಖೆ ಚೇರ್ಮನ್ ಡಾ. ದೀಪ್ತಿ ಜೋಶಿ ಸ್ವಾಗತಿಸಿದರು. ಸಹಚೇರ್ಮನ್ ಜಯಶ್ರೀ ಅಗರವಾಲ ನಿರ್ವಹಿಸಿದರು. ಬಿಇಒ ಉಮೇಶ ಬೊಮ್ಮಕ್ಕನವರ, ಶಿಕ್ಷಣ ಇಲಾಖೆಯ ಸಹಾಯಕ ಯೋಜನಾಧಿಕಾರಿ ರೇಣುಕಾ ಅಮಲಜರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net