

ಹುಬ್ಬಳ್ಳಿ: ತಾಲೂಕಿನ ವರೂರ ಗ್ರಾಮದ ಛಬ್ಬಿ ಕ್ರಾಸ್ನಲ್ಲಿ 800 ವರ್ಷಗಳ ಇತಿಹಾಸವಿರುವ ಶ್ರೀ ಚರಮೂರ್ತೆಶ್ವರ ಮಠದಲ್ಲಿ ಆ. 26ರಂದು ಶ್ರಾವಣ ಮಾಸದ ನಾಲ್ಕನೇ ಸೋಮವಾರ ಸಂಜೆ 5ಕ್ಕೆ ಶ್ರೀ ಚರಮೂರ್ತೆಶ್ವರ ದೇವರ ಮಹಾರಥೋತ್ಸವ ಜರುಗಲಿದೆ. ಅಂದು ಬೆಳಗ್ಗೆ ಶ್ರೀಗಳ ಗದ್ದುಗೆಗೆ ಮಹಾರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ನೆರವೇರಲಿದೆ.
ಚರಮೂರ್ತೆಶ್ವರರ ಚರಿತ್ರೆ: ಶ್ರೀ ಗುರುಲಿಂಗದೇವರು-ಶಿವಲೀಲಾದೇವಿ ದಂಪತಿಯ ಬಹಳ ದಿನಗಳ ತಪಸ್ಸಿನ ಫಲವಾಗಿ ಹಾಲುದೇವರು- ಸಕ್ರದೇವರು ಅವಳಿ-ಜವಳಿ ಪುತ್ರರು ಜನಿಸಿದರು. ಮುಂದೆ ಗುರುಕುಲದಲ್ಲಿ ಅಭ್ಯಾಸ ಮಾಡಿ 20ನೇ ವಯಸ್ಸಿನಲ್ಲಿ ಹಾಲುದೇವರು ವರೂರಿನ ಮಠಕ್ಕೆ ಬಂದರು. ಒಂದು ದಿನ ಅವರಿಗೆ ಸ್ವಪ್ನದಲ್ಲಿ ಶ್ರೀ ರೇಣುಕಾರಾಧ್ಯರು ಪ್ರತ್ಯಕ್ಷರಾದರು. ‘ಮಗು ನೀನು ಧಮೋನ್ನತಿಗಾಗಿ ಜೀವನ ಮುಡಿಪಿಡಬೇಕು. ಇಂದಿನಿಂದ ನೀನು ಚರಮೂರ್ತೆಶ್ವರ ಹೆಸರಿನಿಂದ ಭಕ್ತರನ್ನು ಉದ್ಧರಿಸು’ ಎಂದು ಹೇಳಿ ಮಾಯವಾದರು.
ಮುಂದೆ ಕೆಲ ವರ್ಷಗಳ ಬಳಿಕ ಉಭಯ ಪುತ್ರರಿಗೆ ವಿವಾಹ ಮಾಡಲು ತಂದೆ-ತಾಯಿ ಕನ್ಯಾನ್ವೇಷಣೆಗೆ ತೊಡಗಿದರು. ಆಗ ಸಕ್ರದೇವರು ಮದುವೆಗೆ ಒಪ್ಪಿದರು. ಹಾಲುದೇವರು ನಿರಾಕರಿಸಿದರು. ಹೀಗಾಗಿ, ಭಕ್ತರು ವರೂರಿನಲ್ಲಿ ಹಾಲುದೇವರ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರಿಸಿದರು. ಆ ವೇಳೆ ಬಹಳ ದಿನಗಳಿಂದ ಗ್ರಾಮದಲ್ಲಿ ಮಳೆ ಆಗಿರಲಿಲ್ಲ. ಶ್ರೀಗಳ ಪಟ್ಟಾಭಿಷೇಕದ ದಿನ ಸಾಕು ಎನ್ನುವಷ್ಟು ಮಳೆ ಸುರಿಯಿತು. ಸೇರಿದ ಭಕ್ತರು ಶ್ರೀ ಚರಮೂರ್ತೆಶ್ವರ ಮಹಾರಾಜರಿಗೆ ಜಯವಾಗಲಿ ಎಂದು ಜಯಘೊಷ ಮೊಳಗಿಸಿದರು.
ಘಟಸರ್ಪದ ರೋಷಾಗ್ನಿ ಶಮನ: ಶ್ರೀ ಚರಮೂರ್ತೆಶ್ವರರು ತಪೋನುಷ್ಠಾನಗೈದ ಸ್ಥಳದ ಬಳಿ ಸರ್ಪವೊಂದು ಜನರಿಗೆ ತೊಂದರೆ ನೀಡುತ್ತಿತ್ತು. ಭಕ್ತರು ಇದನ್ನು ನಿವಾರಿಸುವಂತೆ ಶ್ರೀಗಳ ಬಳಿ ನಿವೇದಿಸಿಕೊಂಡರು. ಒಂದು ದಿನ ಶ್ರೀ ಚರಮೂರ್ತೆಶ್ವರರು ಭಕ್ತರ ಸಮ್ಮುಖದಲ್ಲಿ ಘಟಸರ್ಪಕ್ಕೆ ಭಸ್ಮ ಲೇಪಿಸಿ ಅದರ ರೋಷಾಗ್ನಿ ಶಮನಗೊಳಿಸಿದರು. ಇದರಿಂದ ಭಕ್ತರು ನಿಟ್ಟುಸಿರು ಬಿಟ್ಟು ಶ್ರೀಗಳ ಪಾದಕ್ಕೆರಗಿದರು.
ಹೀಗೆ ಬೇಡಿ ಬಂದ ಭಕ್ತರ ಇಷ್ಟಾರ್ಥ ಸಿದ್ಧಿಸುತ್ತ, ಹಲವು ಲೀಲಾ, ಪವಾಡಗಳನ್ನು ಮಾಡಿದ ಶ್ರೀಗಳು ತಮ್ಮ 101ನೇ ವಯಸ್ಸಿನಲ್ಲಿ ಶಿವನ ಅಪ್ಪಣೆಯಂತೆ ಸಮಾಧಿಸ್ಥಿತಿಯಲ್ಲಿ ಧ್ಯಾನಸ್ಥರಾಗಿ ಮಹಾಲಿಂಗದಲ್ಲಿ ಲೀನರಾದರು.
ಇಂದಿಗೂ ಗ್ರಾಮದ ಶ್ರೀ ಚರಮೂರ್ತೆಶ್ವರ ಮಠದಲ್ಲಿರುವ ಗದ್ದುಗೆಗೆ ಬಂದು ಬೇಡುವ ಭಕ್ತರ ಇಷ್ಟಾರ್ಥ ಸಿದ್ಧಿಸುತ್ತ, ಕಷ್ಟಕಾರ್ಪಣ್ಯ ನಿವಾರಿಸುತ್ತಿರುವುದು ಜನಜನಿತ.
ಶ್ರಾವಣದಲ್ಲಿ ನಿತ್ಯ ಅಭಿಷೇಕ
ಶ್ರಾವಣ ಮಾಸದಲ್ಲಿ ಗ್ರಾಮದ ಪ್ರತಿ ಮನೆಗಳ ಭಕ್ತರು ಜಾತಿ, ಮತ, ಪಂಥವೆನ್ನದೇ ಪ್ರತಿದಿನ ಗದ್ದುಗೆಗೆ ಅಭಿಷೇಕ ನೆರವೇರಿಸುತ್ತಾರೆ.