

ಹುಬ್ಬಳ್ಳಿ : ಇಲ್ಲಿನ ಹುಬ್ಬಳ್ಳಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ 2024-25ನೇ ಸಾಲಿನಲ್ಲಿ 1.80 ಕೋಟಿ ರೂ. ಲಾಭ ಗಳಿಸಿದೆ ಎಂದು ಬ್ಯಾಂಕಿನ ಚೇರ್ಮನ್ ವಿಕ್ರಮ ಶಿರೂರು ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಸಾಧನೆಗಳ ಕುರಿತು ವಿವರ ನೀಡಿದ ಅವರು, ಕಳೆದ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಉತ್ತಮ ಸಾಧನೆ ಮಾಡಿದ್ದು, ಗ್ರಾಹಕರು 334 ಕೋಟಿ ರೂ. ಠೇವಣಿ ಇಟ್ಟಿದ್ದಾರೆ. 207.20 ಕೋಟಿ ರೂ. ಸಾಲ ವಿತರಿಸಲಾಗಿದೆ. ಭದ್ರತಾ ಠೇವಣಿಯಾಗಿ ಸರ್ಕಾರದಲ್ಲಿ 112 ಕೋಟಿ ರೂ. ಇಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 32 ಕೋಟಿ ಸಾಲವನ್ನು ಹೆಚ್ಚುವರಿಯಾಗಿ ನೀಡಲಾಗಿದೆ ಎಂದು ವಿವರಿಸಿದರು.
ಬ್ಯಾಂಕಿನ ನಿರ್ದೇಶಕ ಮಲ್ಲಿಕಾರ್ಜುನ ಸಾವಕಾರ ಮಾತನಾಡಿ, ಕಳೆದ ಏಳು ವರ್ಷದಲ್ಲಿ ಬ್ಯಾಂಕ್ 541 ಕೋಟಿ ರೂ. ವ್ಯವಹಾರ ನಡೆಸಿದೆ. ಬ್ಯಾಂಕಿನ ಇನ್ನಷ್ಟು ಶಾಖೆಗಳನ್ನು ತೆರೆಯಲು ರಿಸರ್ವ್ ಬ್ಯಾಂಕ್ನಿಂದ ಅನುಮತಿ ಪಡೆದಿದ್ದು, ಧಾರವಾಡದಲ್ಲಿ ಶೀಘ್ರ ಆರಂಭಿಸಲಾಗುವುದು. ಪ್ರತಿ ಜಿಲ್ಲೆಗೂ ಒಂದೊಂದು ಶಾಖೆ ತೆರೆಯುವ ಯೋಜನೆ ಇದೆ ಎಂದು ಹೇಳಿದರು.
ಬ್ಯಾಂಕ್ ಪದಾಧಿಕಾರಿಗಳಾದ ಗಿರೀಶ ಉಪಾಧ್ಯಾಯ, ಚಂದ್ರಶೇಖರ ಕಮಡೊಳ್ಳಿ, ಬಸವರಾಜ ತೆರದಾಳ ಹಾಗೂ ಇತರರು ಇದ್ದರು.