

ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 2020 ರಿಂದ ಎನ್ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಜಾರಿಯಾದ ನಂತರ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪದವಿ ಓದಿದ ವಿದ್ಯಾರ್ಥಿಗಳಿಗೆ ಈವರೆಗೂ ಮುದ್ರಿತ ಅಂಕಪಟ್ಟಿ ಬಂದಿಲ್ಲ. ಇದರಿಂದ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸ ಕೈಗೊಳ್ಳಲು, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು, ಉದ್ಯೋಗಕ್ಕೆ ಸೇರುವಾಗ ಅಂಕಪಟ್ಟಿ ಇಲ್ಲದಂತಾಗಿದೆ. ಹೀಗಾಗಿ, ಅರ್ಹತೆ ಇದ್ದರೂ ಅವಕಾಶಗಳಿಂದ ವಂಚಿತರಾಗುವಂತ ಪರಿಸ್ಥಿತಿ ಎದುರಾಗಿದೆ. ಬೇಗ ಅಂಕಪಟ್ಟಿ ನೀಡುವಂತೆ ಆಗ್ರಹಿಸಿ ರಾಜ್ಯದ ಹಲವೆಡೆ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ, ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಿವೆ. ಆದರೆ, ಸಮಸ್ಯೆ ಮಾತ್ರ ಇನ್ನೂ ಪರಿಹಾರವಾಗಿಲ್ಲ. ಯುಯುಸಿಎಂಎಸ್ ಪೋರ್ಟಲ್: ರಾಜ್ಯದ ಕಾಲೇಜು ಶಿಕ್ಷಣ ಇಲಾಖೆಯು ಎಲ್ಲ ವಿವಿಗಳು ಮತ್ತು ಕಾಲೇಜುಗಳನ್ನು ಕ್ರೋಢೀಕರಿಸಿ ಎಲ್ಲರಿಗೂ ಒಂದೇ ವ್ಯವಸ್ಥೆಯಡಿ ಮಾಹಿತಿ ಒದಗಿಸಲು ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ - ಯುಯುಸಿಎಂಎಸ್ (ಯುನಿಫೈಡ್ ಯುನಿವರ್ಸಿಟಿ ಆಂಡ್ ಕಾಲೇಜ್ ಮ್ಯಾನೇಜ್ವೆುಂಟ್ ಸಿಸ್ಟಮ್ ಅನುಷ್ಠಾನಗೊಳಿಸಿದೆ. ಇದರಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ವಿವರ, ವಿದ್ಯಾರ್ಥಿಗಳ ದಾಖಲಾತಿ, ಕಲಿಕೆ, ಪರೀಕ್ಷೆ, ಪದವಿ ಹಂತ, ಉಪನ್ಯಾಸಕರ ಮಾಹಿತಿ, ಮೌಲ್ಯಮಾಪನ, ಶೈಕ್ಷಣಿಕ ಕಾರ್ಯಕ್ಷಮತೆ, ಪದೋನ್ನತಿ, ಪಠ್ಯಕ್ರಮ, ಪಾಠ ಯೋಜನೆ, ತರಗತಿ ಮೇಲ್ವಿಚಾರಣೆ ಹೀಗೆ ಎಲ್ಲ ಕೆಲಸಗಳನ್ನು ಯುಯುಸಿಎಂಎಸ್ ಮೂಲಕ ನಿರ್ವಹಿಸಲಾಗುತ್ತಿದೆ. ಸರ್ವರ್ ಸಮಸ್ಯೆ: ರಾಜ್ಯದ ಎಲ್ಲ 22 ವಿವಿಗಳ ವಿದ್ಯಾರ್ಥಿಗಳು ಯುಯುಸಿಎಂಎಸ್ ಮೂಲಕ ಕೋರ್ಸ್ ರಿಜಿಸ್ಟ್ರೇಷನ್ ಮತ್ತು ಶುಲ್ಕ ಪಾವತಿ ವೇಳೆ ಸರ್ವರ್ ಕೈಕೊಡುತ್ತಿದೆ. ಕೆಲವೊಮ್ಮೆ ವಿದ್ಯಾರ್ಥಿಗಳು ಗೂಗಲ್ ಪೇ, ಫೋನ್ ಮೂಲಕ ಶುಲ್ಕ ಪಾವತಿ ಮಾಡಿರುತ್ತಾರೆ. ಖಾತೆಯಿಂದ ಹಣ ಡೆಬಿಟ್ ಆಗಿರುತ್ತದೆ. ಆದರೆ, ಪೋರ್ಟಲ್ನಲ್ಲಿ ಫೇಲ್ಯೂರ್ ಎಂದು ಬಂದಿರುತ್ತದೆ. ಆಗ ವಿದ್ಯಾರ್ಥಿಗಳು ಮತ್ತೆ ಹಣ ಪಾವತಿಸುವ ಅನಿವಾರ್ಯತೆ ಎದುರಾಗಿದೆ. ಡಿಜಿ ಲಾಕರ್ನಿಂದ ಪ್ರಿಂಟ್ ಔಟ್: ಎನ್ಇಪಿ ಜಾರಿಯಾದ ಬಳಿಕ ಈಗ ರಾಜ್ಯದ ಎಲ್ಲ ವಿವಿಗಳು ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ನ್ಯಾಷನಲ್ ಅಕಾಡೆಮಿಕ್ (ನ್ಯಾಡ್) ಮೂಲಕ ಡಿಜಿ ಲಾಕರ್ಗೆ ಅಪ್ಲೋಡ್ ಮಾಡಿರುತ್ತವೆ. ವಿದ್ಯಾರ್ಥಿಗಳು ಸದ್ಯ ಡಿಜಿ ಲಾಕರ್ ಮೂಲಕ ಅಂಕಪಟ್ಟಿಗಳ ಪ್ರಿಂಟ್ ಔಟ್ ಪಡೆದು ಅವುಗಳಿಗೆ ಆಯಾ ಕಾಲೇಜಿನ ಪ್ರಾಚಾರ್ಯರು ಮತ್ತು ಕುಲಸಚಿವರ ಸಹಿ ಪಡೆಯುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಯ ಮತ್ತು ಹಣ ವ್ಯರ್ಥವಾಗುತ್ತಿದೆ.
ಎಲ್ಲ ವಿವಿಗಳಿಗೆ ಒಂದೇ ಮಾದರಿ ಅಂಕಪಟ್ಟಿಗಳನ್ನು ಮಾಡಿಕೊಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಯುಯುಸಿಎಂಸ್ ಪೋರ್ಟಲ್ನಿಂದ ಮೊದಲು ವಿವಿ ವತಿಯಿಂದ ಅಂಕಪಟ್ಟಿ ಡೌನ್ಲೋಡ್ ಮಾಡ್ತಾ ಇದ್ದೇವೆ. ಯುಯುಸಿಎಂಎಸ್ನವರು ಡಾಟಾ ಡೌನ್ಲೋಡ್ ಮಾಡಿ ನಮಗೆ ಕೊಟ್ಟ ಮೇಲೆ ನಾವು ಅಂಕಪಟ್ಟಿ ಮುದ್ರಣ ಮಾಡುತ್ತೇವೆ. ಪೋರ್ಟಲ್ನಲ್ಲಿ ಸ್ವಲ್ಪ ತಾಂತ್ರಿಕ ತೊಂದರೆ ಇತ್ತು. ಈಗ ಅದು ಸರಿಯಾಗಿದೆ. ಶೀಘ್ರದಲ್ಲಿ ವಿದ್ಯಾರ್ಥಿಗಳಿಗೆ ಮುದ್ರಿತ ಅಂಕಪಟ್ಟಿ ನೀಡುತ್ತೇವೆ. | ಡಾ. ನಿಜಲಿಂಗಪ್ಪ ಮಟ್ಟಿಹಾಳ, ಕವಿವಿ ಮೌಲ್ಯಮಾಪನ ಕುಲಸಚಿವ ರಾಜ್ಯದಲ್ಲಿ ಎಎನ್ಇಪಿ ಜಾರಿಯಾದ ಬಳಿಕ ಕಳೆದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಈವರೆಗೂ ಮುದ್ರಿತ ಅಂಕಪಟ್ಟಿ ನೀಡಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ. ಸರ್ಕಾರ, ಉನ್ನತ ಶಿಕ್ಷಣ ಸಚಿವರು, ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ, ವಿದ್ಯಾರ್ಥಿಗಳಿಗೆ ಅಂಕಪಟ್ಟಿಗಳನ್ನು ವಿತರಿಸಬೇಕು. | ಎಸ್.ವಿ. ಸಂಕನೂರ ವಿಧಾನ ಪರಿಷತ್ ಸದಸ್ಯ