ಟೈಗರ್ ಮಲ್ಲಿಗೆ ಮೊಗ್ಗು ರೈತ ಹಿಗ್ಗು

tiger mallige
Published on

ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಬೇಡಿಕೆ ಇರುವಂಥ ಬೆಳೆ ಬೆಳೆದರೆ ರೈತರು ನಾಲ್ಕು ಕಾಸು ನೋಡಲು ಸಾಧ್ಯ. ಇದನ್ನು ಅರಿತ ಧಾರವಾಡ ತಾಲೂಕು ಕಬ್ಬೇನೂರ ಗ್ರಾಮದ ರೈತ ಮಹಾಂತೇಶ ಕೆಂಗಾನೂರ ಮೊದಲ ಬಾರಿಗೆ ಟೈಗರ್ ಮಲ್ಲಿಗೆ ಮೊಗ್ಗು ಬೆಳೆದು ಸೈ ಎನಿಸಿಕೊಂಡಿದ್ದಾರೆ. 2023ರ ಜೂನ್​ನಲ್ಲಿ ತಮಿಳುನಾಡಿನಿಂದ 46 ರೂ.ಗೆ ಒಂದರಂತೆ 600 ಟೈಗರ್ ಮಲ್ಲಿಗೆ ಸಸಿ ತಂದು 10/10 ಅಂತರದಲ್ಲಿ ನಾಟಿ ಮಾಡಲಾಗಿದ್ದು, ಹನಿ ನೀರಾವರಿ ಮೂಲಕ 2 ದಿನಕ್ಕೊಮ್ಮೆ ನೀರು ಹಾಯಿಸಲಾಗುತ್ತದೆ. ಸಸಿ ನಾಟಿ ಮಾಡಿದ ಒಂದು ವರ್ಷ ಗಿಡಗಳನ್ನು ಬೆಳೆಸಲಾಯಿತು. 2024ರ ಅಕ್ಟೋಬರ್​ನಲ್ಲಿ ಮೊಗ್ಗುಗಳನ್ನು ಕಟಾವು ಮಾಡಲು ಆರಂಭಿಸಲಾಗಿದ್ದು, ನಿತ್ಯ 15 ಕೆಜಿ ಮೊಗ್ಗು ಸಿಗುತ್ತದೆ. ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಮೊಗ್ಗಿಗೆ ಅಂದಾಜು 300 ರೂ.ನಂತೆ ಮಾರಾಟವಾಗುತ್ತದೆ. ನಿತ್ಯ 4,500 ರೂ. ಆದಾಯ ಬರುತ್ತದೆ. ಆಳು ಸೇರಿ ಎಲ್ಲ ಖರ್ಚು ಕಳೆದು ಆರು ತಿಂಗಳಿಗೆ ಅಂದಾಜು 2 ಲಕ್ಷ ರೂ. ಉಳಿತಾಯವಾಗುತ್ತದೆ. ಮೊಗ್ಗುಗಳನ್ನು ಕಟಾವು ಮಾಡಿ ಹುಬ್ಬಳ್ಳಿ-ಧಾರವಾಡ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ. ವ್ಯಾಪಾರಸ್ಥರು ಬೆಂಗಳೂರು ಮಾರುಕಟ್ಟೆ ಬೆಲೆ ನೋಡಿಕೊಂಡು ನಮಗೆ ದರ ತಿಳಿಸುತ್ತಾರೆ ಎನ್ನುತ್ತಾರೆ ಮಹಾಂತೇಶ ಕೆಂಗಾನೂರ. ಆರು ತಿಂಗಳು ಸೀಜನ್: ಮೊಗ್ಗಿಗೆ ಮದುವೆ ಸೀಜನ್ ಇರುವ 6 ತಿಂಗಳು ಮಾತ್ರ ಬೇಡಿಕೆ. ಆಗ ಮಾತ್ರ ಮೊಗ್ಗು ಕಟಾವು ಮಾಡುತ್ತಾರೆ. ಸೀಜನ್ ಇಲ್ಲದಿರುವಾಗ (ಜೂ.15ರ ಬಳಿಕ) ಹೂವಿನ ಗಿಡಗಳನ್ನು ಕಟ್ ಮಾಡಲಾಗುತ್ತದೆ. ಗಿಡ ಸಣ್ಣ ಇದ್ದಷ್ಟೂ ಒಳ್ಳೆಯದು, ನಿರ್ವಹಣೆ ಸುಲಭ, ಮೊಗ್ಗು ದಪ್ಪ ಇರುತ್ತದೆ. ಟಾನಿಕ್, ಗೊಬ್ಬರ ಕೊಡಲು ಅನುಕೂಲವಾಗುತ್ತದೆ. ಉತ್ತಮ ಇಳುವರಿಯೂ ಬರುತ್ತದೆ. ಎಂಟು ಲಕ್ಷ ರೂ. ಆದಾಯ: ರೈತ ಮಹಾಂತೇಶ ಅವರದು ಒಟ್ಟು 25 ಎಕರೆ ಹೊಲವಿದ್ದು, ಅದರಲ್ಲಿ ಮುಂಗಾರಿ ಉದ್ದು, ಹೆಸರು, ಉಳ್ಳಾಗಡ್ಡಿ, ಹಿಂಗಾರಿನಲ್ಲಿ ಕಡಲೆ, ಗೋಧಿ, ಜೋಳ, ಕುಸುಬೆ ಬೆಳಯಲಾಗುತ್ತದೆ ಎರಡೂ ಹಂಗಾಮು ಸೇರಿ ಎಲ್ಲ ಖರ್ಚು ಕಳೆದು ಅಂದಾಜು ಎಂಟು ಲಕ್ಷ ರೂ. ಆದಾಯ ಗಳಿಸುತ್ತಾರೆ. ಭಾರಿ ಡಿಮಾಂಡ್ : ಟೈಗರ್ ಮಲ್ಲಿಗೆ ಮೊಗ್ಗುಗಳಿಂದ ಹಾರ, ದಂಡಿ, ಹೆಣ್ಣು ಮಕ್ಕಳು ತಲೆ ಕೂದಲಿನ ಅಂದ ಹೆಚ್ಚಿಸಲು ಬಳೆ ಆಕಾರದಲ್ಲಿ ಹೆಣೆಯಲಾಗುತ್ತದೆ. ನಿಶ್ಚಿತಾರ್ಥ, ಮದುವೆ, ಸೀಮಂತ, ಮತ್ತಿತರ ಶುಭ ಕಾರ್ಯಗಳಲ್ಲಿ ಈ ಮೊಗ್ಗಿನಿಂದ ತಯಾರಿಸಿದ ಹಾರಗಳು, ಉದ್ದನೆಯ ಜಡೆಗಳಿಗೆ ಭಾರಿ ಡಿಮಾಂಡ್ ಇದೆ.

ಟೈಗರ್ ಮಲ್ಲಿಗೆ ಮೊಗ್ಗು ನಾವು ಸ್ಥಳೀಯ ರೈತರಿಂದ ಖರೀದಿ ಮಾಡುತ್ತೇವೆ. ಇಲ್ಲಿನ ಬೆಳೆ ಇನ್ನೂ ಹೆಚ್ಚು ಗುಣಮಟ್ಟದಿಂದ ಇರುವಂತೆ ರೈತರು ಬೆಳೆಯಬೇಕು. ಶಿರಾ, ಬೆಂಗಳೂರಿನಿಂದ ತರಿಸುವ ಮೊಗ್ಗು ದಪ್ಪ ಇರುತ್ತದೆ, ಮೂರು ದಿನ ಬಾಡುವುದಿಲ್ಲ. ಅದೇ ರೀತಿ ಇಲ್ಲಿನ ರೈತರು ದಪ್ಪ ಮೊಗ್ಗು ಬೆಳೆದರೆ ಸ್ಥಳೀಯ ಗ್ರಾಹಕರಿಗೆ ಅನುಕೂಲ. | ಗೌಸ್ ಹುಬ್ಬಳ್ಳಿ, ಹೂವಿನ ವ್ಯಾಪಾರಸ್ಥರು ಹುಬ್ಬಳ್ಳಿ ನರೇಗಾ ಯೋಜನೆಯಡಿ ರೈತ ಮಹಾಂತೇಶ ಅವರಿಗೆ 1 ಎಕರೆಯಲ್ಲಿ ಟೈಗರ್ ಮಲ್ಲಿಗೆ ಬೆಳೆಯಲು 50 ಸಾವಿರ ರೂ. ಸಬ್ಬಿಡಿ ನೀಡಲಾಗಿದೆ. ಇನ್ನುಳಿದಂತೆ ಬಾಳೆ, ಎಲೆ ಬಳ್ಳಿ, ತೆಂಗು, ಕರಿಬೇವು, ಲಿಂಬೆ, ಮಾವು, ಚಿಕ್ಕು, ನುಗ್ಗೆ, ಪಪ್ಪಾಯಿ, ಪೇರಲ, ಗುಲಾಬಿ, ಡ್ರ್ಯಾಗನ್ ಹಣ್ಣು ಬೆಳೆಯಲು ರೈತರಿಗೆ ಸಬ್ಸಿಡಿ ಲಭ್ಯವಿದೆ. ರೈತರು ತೋಟಗಾರಿಕೆ ಬೆಳೆ ಬೆಳೆಯಲು ಮುಂದಾಗಬೇಕು. | ಇಮ್ತಿಯಾಜ್ ಚಂಗಾಪುರಿ, ಹಿರಿಯ ಸಹಾಯಕ ತೋಟಗಾರಿಕೆ ರ್ದೇಶಕರು, ಧಾರವಾಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net