ಶಾಲಾ ಪಠ್ಯದಲ್ಲಿರಲಿ ಸ್ವ ಉದ್ಯೋಗ ಪಾಠ

7-swadeshi-samvad
Published on

ಹುಬ್ಬಳ್ಳಿ: ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜು ಹಂತದಿಂದಲೇ ಒಂದು ವಿಷಯವನ್ನಾಗಿ ಸ್ವ-ಉದ್ಯೋಗದ ಬಗ್ಗೆ ಪಠ್ಯ ಚಟುವಟಿಕೆ ಅಳವಡಿಸುವ ಅಗತ್ಯವಿದೆ ಎಂದು ಯುವ ಉದ್ಯಮಿ, ಡೆಕ್ಕನ್ ಕ್ರೇನ್ಸ್ ಎಂಡಿ ರಾಜೀವ್ ನಿಗದಿ ಹೇಳಿದರು.

ಸ್ವದೇಶಿ ಜಾಗರಣ ಮಂಚ್ ಕರ್ನಾಟಕ, ಸ್ವಾವಲಂಬಿ ಭಾರತ ಅಭಿಯಾನ ವತಿಯಿಂದ ಇಲ್ಲಿಯ ವಿದ್ಯಾನಗರದ ಹೊಸ ಕೋರ್ಟ್ ಹಿಂಭಾಗದ ಕಲ್ಲೂರ ಲೇಔಟ್​ನಲ್ಲಿ ಆಯೋಜಿಸಿರುವ ಸ್ವದೇಶಿ ಮೇಳದ 3ನೇ ದಿನವಾದ ಶುಕ್ರವಾರ ನಿರುದ್ಯೋಗ ಸಮಸ್ಯೆ-ಪರಿಹಾರದ ಮಾರ್ಗಗಳು’ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಎಲ್ಲ ಉತ್ಪನ್ನಗಳಿಗೂ ದೊಡ್ಡ ಮಾರುಕಟ್ಟೆ ಇದೆ. ಇದನ್ನು ಅರಿತಿರುವ ವಿದೇಶಿ ಉದ್ಯಮಿಗಳು ಇಲ್ಲಿಗೆ ಬಂದು ಬಂಡವಾಳ ಹೂಡಿ ವಸ್ತುಗಳನ್ನು ಉತ್ಪಾದಿಸುತ್ತಾರೆ. ಇಲ್ಲಿಯೇ ಮಾರಾಟ ಮಾಡಿ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ದೇಶದ ಯುವ ಸಮೂಹ ಪದವಿ ಪಡೆದ ಬಳಿಕ ತಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಮುಂದುವರಿಯಬೇಕು. ತಾವೇ ಉದ್ಯಮ ಆರಂಭಿಸಿ ಇತರರಿಗೆ ಉದ್ಯೋಗ ನೀಡುವಂತಾಗಬೇಕು ಎಂದರು. ಸ್ವದೇಶಿ ಜಾಗರಣ ಮಂಚ್ ಪ್ರಚಾರಕ ಕೆ. ಜಗದೀಶ ಮಾತನಾಡಿ, ರಾಜ್ಯ ಸರ್ಕಾರ ರಾಜ್ಯದ ಯುವ ಜನತೆಗೆ ಮೊದಲು ಉದ್ಯೋಗ ಭಾಗ್ಯ ನೀಡಲು ಮುಂದಾಗಬೇಕು. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆ ಗಳನ್ನು ಸಂಪೂರ್ಣ ಭರ್ತಿ ಮಾಡಬೇಕು. ಇದರಿಂದ ಎಲ್ಲ ಭಾಗ್ಯಗಳು ತಾನಾಗಿಯೇ ಜನರಿಗೆ ಸಿಗುತ್ತವೆ ಎಂದರು.

ಡಾ. ಸದಾನಂದ ಹಾವಣಗಿ ಮಾತನಾಡಿ, ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರು ಒಂದು ಲಾರಿಯಿಂದ ಉದ್ಯಮ ಆರಂಭಿಸಿ ಇಂದು ಸಾವಿರಾರು ಲಾರಿಗಳನ್ನು ಹೊಂದಿದ್ದಾರೆ. ಅವರನ್ನು ಮಾದರಿಯಾಗಿಟ್ಟು ಯುವಸಮೂಹ ಬೆಳೆಯಬೇಕು ಎಂದರು.

ಪ್ರಾಧ್ಯಾಪಕ ವೀರೇಶ ಬಾಳಿಕಾಯಿ ಮಾತನಾಡಿ, ಯುವಕರು ಮೊದಲು ಆಯಾ ಉದ್ಯೋಗಕ್ಕೆ ಸಂಬಂಧಿಸಿದ ಕೌಶಲ ಕಲಿಯಬೇಕು. ಬಳಿಕ ಉದ್ಯಮ ಆರಂಭಿಸಬೇಕು. ನವೋದ್ಯಮಿಗಳಿಗೆ ಕೇಂದ್ರ ಸರ್ಕಾರ ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ. ಅವುಗಳ ಸದುಪಯೋಗ ಪಡೆಯಬೇಕು ಎಂದರು.

ಡಾ. ಎಚ್.ವಿ. ಬೆಳಗಲಿ ಮಾತನಾಡಿ, ಪದವಿಗಳನ್ನು ಪಡೆಯುವುದು ಸರ್ಕಾರಿ ನೌಕರಿ ಪಡೆಯುವುದಕ್ಕಷ್ಟೆ ಸೀಮಿತವಲ್ಲ. ಅದು ಜ್ಞಾನಾರ್ಜನೆಗೆ ಎಂದು ತಿಳಿಯಬೇಕು. ತಾವು ಕಲಿತ ವಿಷಯಗಳಲ್ಲಿ ಸ್ವ ಉದ್ಯಮ ಆರಂಭಿಸಿ, ಇತರರಿಗೂ ಉದ್ಯೋಗ ನೀಡಬೇಕು ಎಂದರು.

ಸ್ವದೇಶಿ ಮೇಳದ ಸಂಯೋಜಕ ಜಯತೀರ್ಥ ಕಟ್ಟಿ, ಸಂಚಾಲಕಿ ರಚಿತಾ ಆಕಳವಾಡಿ, ಇತರರಿದ್ದರು. ಸಂಘಟಕರಾದ ಸಂದೀಪ ಬೂದಿಹಾಳ ಸ್ವಾಗತಿಸಿದರು. ಮಣಿಕಂಠ ಕಳಶ ನಿರೂಪಿಸಿದರು.

ಉದ್ಯಮಿಗಳಿಂದ ಮಾಹಿತಿ ಪಡೆದರು

ಸಂವಾದದಲ್ಲಿ ಭಾಗವಹಿಸಿದ್ದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಸ್ವ ಉದ್ಯೋಗ ಆರಂಭಿಸಲು ಬೇಕಾದ ಹಣಕಾಸು ವ್ಯವಸ್ಥೆ, ಕೌಶಲ, ಮಾನವ ಸಂಪನ್ಮೂಲ, ಸರ್ಕಾರದ ಸೌಲಭ್ಯಗಳು ಹೀಗೆ ವಿವಿಧ ವಿಷಯಗಳ ಬಗ್ಗೆ ಉದ್ಯಮಿಗಳಿಂದ ಮಾಹಿತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net