ಏ. 10ರಿಂದ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಮಠದಲ್ಲಿ 9ನೇ ವರ್ಷದ ರಾಜ್ಯ ಮಟ್ಟದ ಭಜನಾ ಸ್ಪರ್ಧೆ

19GDG02
Published on

ಗದಗ: ಜಗದ್ಗುರು ಸಿದ್ಧಾರೂಢ ಸ್ವಾಮೀಜಿ ಅವರ ಜಯಂತ್ಯುತ್ಸವದ ಅಂಗವಾಗಿ ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ ಏ. 10ರಿಂದ 15ರ ವರೆಗೆ ರಾಜ್ಯ ಮಟ್ಟದ ಒಂಭತ್ತನೇ ವರ್ಷದ ಭಜನಾ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ರಾಜ್ಯ ಮಟ್ಟದ ಭಜನಾ ಸ್ಪರ್ಧೆ ಸಮಿತಿ ಅಧ್ಯಕ್ಷ ಹಾಗೂ ಶ್ರೀಮಠದ ಧರ್ಮದರ್ಶಿ ಶಾಮಾನಂದ ಪೂಜೇರಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆಯಲ್ಲಿ ಭಾಗವಹಿಸುವ ಭಜನಾ ತಂಡದವರು ಏ. 10ರೊಳಗಾಗಿ ಶ್ರೀಮಠದ ಟ್ರಸ್ಟ್ ಕಮೀಟಿಯ ಕಾರ್ಯಾಲಯದಲ್ಲಿ ಹೆಸರು ನೋಂದಾಯಿಸಕೊಳ್ಳಬೇಕು. ಭಾಗವಹಿಸುವ ಭಜನಾ ಮೇಳದವರಿಗೆ ಶ್ರೀಮಠದಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ಮತ್ತು ಒಂದು ಬದಿಯ ಬಸ್ ಚಾರ್ಜನ್ನು ಪ್ರತಿ ತಂಡದ 6ಜನರಿಗೆ ನೀಡಲಾಗುವದು. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಂದು ಭಜನಾ ತಂಡಕ್ಕೆ "ಸವಿನೆನಪಿನ ಕಾಣಿಕೆ" ಹಾಗೂ ಪ್ರತಿಯೊಂದು ತಂಡದ ಪ್ರತಿಯೊಬ್ಬ ಕಲಾವಿದರಿಗೂ "ಪ್ರಶಸ್ತಿ ಪತ್ರ" ನೀಡಲಾಗುವದು ಎಂದು ಹೇಳಿದರು.

ಭಜನಾ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡದವರಿಗೆ ಮೂರು ಪದಗಳನ್ನು ಹಾಡುವ ಅವಕಾಶವಿದ್ದು, ಮೂರೂ ಪದಗಳನ್ನು 18 ನಿಮಿಷಗಳಲ್ಲಿ ಹಾಡಬೇಕು. ಪ್ರತಿ ತಂಡದವರು ಎರಡು ಪದ್ಯಗಳನ್ನು ಕೈವಲ್ಯ ಸಾಹಿತ್ಯದ ಮೇಲೆ ಕಡ್ಡಾಯವಾಗಿ ಹಾಡಬೇಕು (ಕೈವಲ್ಯ ಸಾಹಿತ್ಯ ಎಂದರೆ ಶ್ರೀಮನ್ ನಿಜಗುಣ ಶಿವಯೋಗಿಗಳವರ, ಶ್ರೀ ಸರ್ಪಭೂಷಣ ಶಿವಯೋಗಿಳವರ, ಶ್ರೀ ಮಹಾಲಿಂಗರಂಗರ ಸಾಹಿತ್ಯಗಳು), ಪ್ರತಿ ತಂಡದವರು ಮೂರನೇ ಪದ್ಯವನ್ನು ಜಗದ್ಗುರು ಸಿದ್ಧಾರೂಢರ ಮೇಲಿನ ಪದ್ಯ, ದಾಸರ ಪದ್ಯ. ಶಿಶುನಾಳ ಶರೀಫರ ಪದ್ಯ ಹಾಗೂ ವಚನ ಸಾಹಿತ್ಯ ಇವುಗಳಲ್ಲಿ ಯಾವುದಾದರೊಂದು ಹಾಡಬಹುದು. ಇಲ್ಲವೇ, ಮೂರು ಪದ್ಯಗಳನ್ನು ಕೈವಲ್ಯ ಸಾಹಿತ್ಯದ ಮೇಲೆ ಹಾಡಬಹುದು. ಸಿದ್ದಾರೂಢರ ಮೇಲಿನ ಪದ್ಯ, ದಾಸರ ಪದ್ಯ, ಶರೀಫರ ಪದ್ಯ ಹಾಡುವವರು ತಮ್ಮ ಹಾಡಿನ ಸಾಹಿತ್ಯದ ಒಂದು ಪ್ರತಿಯನ್ನು ನಿರ್ಣಾಯಕರ ಕಡೆ ಒಪ್ಪಿಸಿ ಹಾಡಬೇಕು. ತಾವು ಹಾಡುವ ಪದ್ಯದ ಹೆಸರು. ರಚಿಸಿದ ಕವಿಗಳ ಹೆಸರು, ರಾಗ, ತಾಳಗಳ ವಿವರವನ್ನು ಒಂದು ಹಾಳೆಯ ಮೇಲೆ ಬರೆದು ನಿರ್ಣಾಯಕರ ಕಡೆ ಕೊಟ್ಟು ಹಾಡಬೇಕು. ಜಾನಪದ ಹಾಗೂ ಸಿನೆಮಾ ಶೈಲಿಯಲ್ಲಿ ಹಾಡುವವರಿಗೆ ಅವಕಾಶ ನೀಡಲಾಗುವದಿಲ್ಲ. ಒಂದು ಸ್ಪರ್ಧೆಯಲ್ಲಿ ಭಾಗವಹಿಸುವ ತಂಡದ ಕಲಾವಿದರ ಸಂಖ್ಯೆ 6ಕ್ಕಿಂತ ಕಡಿಮೆ ಇರಬಾರದು ಮತ್ತು 10 ಕ್ಕಿಂತ ಹೆಚ್ಚಿಗೆ ಇರಬಾರದು. ಒಂದು ತಂಡದಲ್ಲಿ ಭಾಗವಹಿಸಿದ ಕಲಾವಿದರಿಗೆ ಮತ್ತೊಂದು ತಂಡದಲ್ಲಿ ಹಾಡಲು ಅವಕಾಶ ಇರುವದಿಲ್ಲ. ಆದರೆ, ತಬಲಾ ವಾದಕರಿಗೆ ಮಾತ್ರ ಕೇವಲ 2 ತಂಡಗಳಲ್ಲಿ ತಬಲಾ ಸಾಥ್ ನೀಡಲು ಅವಕಾಶ ನೀಡಲಾಗುವುದು. ಇನ್ನುಳಿದ ನಿಯಮಗಳನ್ನು ಸ್ಪರ್ಧೆಯ ಮುಂಚಿತವಾಗಿ ಸ್ಥಳದಲ್ಲಿಯೇ ಎಲ್ಲ ತಂಡದವರಿಗೆ ತಿಳಿಸಲಾಗುವುದು. ಸ್ಪರ್ಧೆಯ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಬಂದಲ್ಲಿ ನಿರ್ಣಾಯಕರ ಹಾಗೂ ಶ್ರೀ ಸಿದ್ದಾರೂಢ ಸ್ವಾಮಿಯವರ ಟ್ರಸ್ಟ್ ಕಮೀಟಿಯ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯ ಸಮಿತಿಯ ನಿರ್ಣಯವೇ ಅಂತಿಮ. ಇದರಲ್ಲಿ ಬೇರೆಯವರಿಗೆ ಅವಕಾಶ ಇರುವದಿಲ್ಲ ಎಂದರು.

ಭಜನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 1,00,000 ರೂ.  ದ್ವಿತೀಯ 80,000 ರೂ., ತೃತೀಯ 70,000 ರೂ., ಹಾಗೂ ಸಮಾಧಾನಕರ ಬಹುಮಾನವಾಗಿ 10 ತಂಡಗಳಿಗೆ 9,000 ರೂ. ನೀಡಲಾಗುವುದು. 16 ವರ್ಷದೊಳಗಿನ ಬಾಲಕರ ಹಾಗೂ ಬಾಲಕಿಯರ ತಲಾ ಒಂದು ತಂಡಕ್ಕೆ 10,000 ರೂ. ನೀಡಲಾಗುವುದು.

ವೈಯಕ್ತಿಕ ಬಹುಮಾನ (ತಲಾ ಇಬ್ಬರಿಗೆ):  ಉತ್ತಮ ಹಾಡುಗಾರರಿಗೆ 3,000 ರೂ., ಉತ್ತಮ ಹಾರ್ಮೋನಿಯಂ ವಾದಕರಿಗೆ 3,000 ರೂ.,  ಉತ್ತಮ ತಬಲಾ ವಾದಕರಿಗೆ 3,000 ರೂ., ಉತ್ತಮ ತಾಳ ವಾದಕರಿಗೆ 3,000 ರೂ., ಉತ್ತಮ ಧಮಡಿ ವಾದಕರಿಗೆ 3,000 ರೂ., ಬಹುಮಾನ ನೀಡಲಾಗುತ್ತಿದೆ ಎಂದರು. ಮಾಹಿತಿಗಾಗಿ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿಯವರ ಮಠ ಟ್ರಸ್ಟ್ ಮೊಬೈಲ್ ಸಂಖ್ಯೆ 9880169881, 8095882033 ಸಂಪರ್ಕಿಸಬಹುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಕಮೀಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ, ಪುನೀತ ಮಹಾರಾಜರು, ಆತ್ಮಾನಂದ ಸ್ವಾಮೀಜಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿ.ಆರ್. ಓದುಗೌಡರ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net