

ಹುಬ್ಬಳ್ಳಿ: ಭಾರತೀಯ ಧಾರ್ವಿುಕ ಪರಂಪರೆಯಲ್ಲಿ ಮಹತ್ವಪೂರ್ಣ ಅಂಶಗಳನ್ನು ಕಾಣುತ್ತೇವೆ. ಶ್ರೀ ಜಗದ್ಗುರು ರಂಭಾಪುರಿ ಪೀಠದ ಕ್ಷೇತ್ರನಾಥ ಮತ್ತು ಗೋತ್ರ ಪುರುಷನಾದ ಶ್ರೀ ವೀರಭದ್ರ ಸ್ವಾಮಿಯ ಕ್ರಿಯಾ ಕರ್ತೃತ್ವ ಶಕ್ತಿ ಅಮೋಘವಾದದ್ದು. ಧರ್ಮ ಮತ್ತು ಸಂಸ್ಕೃತಿಯ ಸಂರಕ್ಷಕನಾಗಿ ಶ್ರೀ ವೀರಭದ್ರಸ್ವಾಮಿ ಎಲ್ಲರ ಆರಾಧ್ಯ ದೈವನಾಗಿ ಪೂಜೆಗೊಳ್ಳುತ್ತಿದ್ದಾನೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಇಲ್ಲಿನ ವಿದ್ಯಾನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.
ಶಿವಶಕ್ತಿಯಿಂದ ಈ ಜಗತ್ತು ನಿರ್ವಣಗೊಂಡಿದೆ. ಕಣ್ಣಿಗೆ ಕಾಣದ, ವಿಜ್ಞಾನಕ್ಕೂ ನಿಲುಕದ, ಅವ್ಯಕ್ತವಾದ ಚೈತನ್ಯ ಶಕ್ತಿಗೆ ದೇವರೆಂದು ನಂಬಿ ನಡೆದವರು ಭಾರತೀಯರು. ನೆಲ, ಜಲ, ಗಾಳಿ, ಬೆಳಕು ದೇವರೆಂದು ಪೂಜಿಸಿದವರು. ದಕ್ಷಬ್ರಹ್ಮನ ಅಹಂಕಾರ ಮಿತಿಮೀರಿದಾಗ ಶಿವನಿಗೆ ಅವಮಾನಿಸಿದ ಸಂದರ್ಭದಲ್ಲಿ ಪರಶಿವನ ಜಟಾಮುಕುಟದಿಂದ ಅವತರಿಸಿ ಬಂದವರೇ ಶ್ರೀ ವೀರಭದ್ರಸ್ವಾಮಿ ಎಂದರು.
ದುಷ್ಟರ ಸಂಹಾರ ಶಿಷ್ಟರ ಪರಿಪಾಲನೆ ಈತನ ಮೊದಲ ಕರ್ತವ್ಯ. ಶ್ರೀ ವೀರಭದ್ರಸ್ವಾಮಿಯನ್ನು ವೀರಶೈವ ಲಿಂಗಾಯತರಷ್ಟೇ ಅಲ್ಲದೆ, ಬೇರೆ ಸಮುದಾಯದ ಜನರು ಕೂಡ ಇಂದಿಗೂ ಪೂಜಿಸುತ್ತಾರೆ. ವ್ಯಕ್ತಿ ಶಕುನಿಯಾದರೆ ಧರ್ಮ ಛಿದ್ರಗೊಳ್ಳುತ್ತದೆ. ವ್ಯಕ್ತಿ ವೀರಭದ್ರನಾಗಿ ಬಾಳಿದರೆ ಸಮಾಜ, ಧರ್ಮ ಭದ್ರಗೊಳ್ಳುತ್ತದೆ. ದುಷ್ಟ ಶಕ್ತಿಗಳ ನಿವಾರಣೆಗಾಗಿ ಮತ್ತೊಮ್ಮೆ ವೀರಭದ್ರಸ್ವಾಮಿ ಅವತರಿಸಿ ಬರುವ ಅಗತ್ಯವಿದೆ. ಇಂಥ ವೀರಭದ್ರಸ್ವಾಮಿ ಎಲ್ಲೆಡೆ ನೆಲೆಸಿದ್ದರೂ ಆತನ ಮೂಲ ಶಕ್ತಿಕೇಂದ್ರ ರಂಭಾಪುರಿ ಪೀಠ ಎಂಬುದನ್ನು ಯಾರು ಮರೆಯುವಂತಿಲ್ಲ ಎಂದರು.
ಸಮಾರಂಭದಲ್ಲಿ ವಿಶ್ವನಾಥ ಹಿರೇಗೌಡರ, ಸದಾನಂದ ಡಂಗನವರ, ವಿ.ಜಿ. ಪಾಟೀಲ, ಜಿ.ವಿ. ಹಿರೇಮಠ, ಚೆನ್ನಯ್ಯ ಹಿರೇಮಠ, ಟಾಕನಗೌಡ ಗಬ್ಬೂರು, ಬಸವರಾಜ ಸುಳ್ಳದ, ಚೆನ್ನವೀರ ಹಿರೇಮಠ, ಮೊದಲಾದ ಗಣ್ಯರು ಭಾಗವಹಿಸಿದ್ದರು.