

ಹುಬ್ಬಳ್ಳಿ: ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿ ಮತ್ತು ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸುಳ್ಳು ಆರೋಪಗಳನ್ನು ಮಾಡಿ ಎಸ್ಐಟಿ ತನಿಖೆಗೆ ಒಳಪಡಿಸಿರುವ ವ್ಯಕ್ತಿ ಹಾಗೂ ಸಂಘಟನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅನಾಮಧೇಯ ವ್ಯಕ್ತಿಯೊಬ್ಬ ಧರ್ಮಸ್ಥಳದ ಕುರಿತು ಇಲ್ಲಸಲ್ಲದ ಆರೋಪ ಮಾಡಿದ್ದಾನೆ. ಸುಳ್ಳು ಆರೋಪಗಳಿಂದ ಭಕ್ತರ ಮನಸಿಗೆ ನೋವುಂಟಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರಂಭದಲ್ಲಿ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಅವಶ್ಯಕತೆ ಇಲ್ಲ ಎಂದು ಹೇಳಿದ್ದರು. ಆದರೆ, ಒಂದೇ ದಿನದಲ್ಲಿ ನಿರ್ಧಾರ ಬದಲಿಸಿ ಎಸ್ಐಟಿ ತನಿಖೆಗೆ ಆದೇಶ ಮಾಡಿದ್ದರ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎಸ್ಐಟಿ ತನಿಖೆ ನಡೆಯುತ್ತಿರುವಾಗ ಕೆಲ ವ್ಯಕ್ತಿಗಳು ಹಾಗೂ ಸಂಘಟನೆಗಳು ಕೆಟ್ಟ ಶಬ್ದಗಳಿಂದ ಅಂತರ್ಜಾಲದಲ್ಲಿ ಟೀಕೆ ಮಾಡಿ ಧರ್ಮಸ್ಥಳದ ಪಾವಿತ್ರ್ಯ್ಕೆ ಧಕ್ಕೆ ಮಾಡಿದ್ದಾರೆ. ಅಂತಹ ಅಪಪ್ರಚಾರಗಳನ್ನು ನಿಲ್ಲಿಸುವಲ್ಲಿ ಗೃಹ ಸಚಿವರು ವಿಫಲರಾಗಿದ್ದಾರೆ. ಅಂತರ್ಜಾಲದಲ್ಲಿ ಅಪಪ್ರಚಾರ ಮಾಡಿದವರ ವಿರುದ್ಧ ಏಕೆ ಕ್ರಮ ಜರುಗಿಸಿಲ್ಲ ಎಂಬ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.