ಗುಂಪು ಘರ್ಷಣೆಗೆ ಬೆಚ್ಚಿ ಬಿದ್ದ ಹುಬ್ಬಳ್ಳಿ

crime
Published on

ಹುಬ್ಬಳ್ಳಿ: ಹಳೇ ದ್ವೇಷ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿದ್ದು, ಖಡ್ಗ ಮಾದರಿಯ ಮಾರಕಾಸ್ತ್ರವನ್ನು ಝಳಪಿಸಿದ್ದರಿಂದ ಬೆಚ್ಚಿ ಬೀಳುವಂತೆ ಮಾಡಿದೆ.

ಗಂಗಾಧರನಗರದ ನಿವಾಸಿ ಶ್ಯಾಮ ಜಾಧವ ಮತ್ತು ಆತನ ಸಹಚರರು ಮಂಟೂರ ರಸ್ತೆಯ ರುದ್ರಭೂಮಿಗೆ ಸುರೇಶ ಎಂಬಾತನ ಶವಸಂಸ್ಕಾರಕ್ಕೆ ಹೋಗಿ ಬರುತ್ತಿದ್ದರು. ಈ ವೇಳೆ ಎಂ.ಡಿ. ದಾವೂದ ಸಹೋದರ ಜಿಲಾನಿ ನದಾಫ್ ಎಂಬಾತ ರಸ್ತೆಯಲ್ಲಿ ಮಂಟೂರು ರಸ್ತೆಯ ಅರಳಿಕಟ್ಟಿ ಓಣಿಯಲ್ಲಿ ನಿಂತಿದ್ದ. ಶ್ಯಾಮ ಜಾಧವ ಸಹಚರರನ್ನು ಗುರಾಯಿಸಿ ನೋಡಿದ್ದಾನೆ ಎನ್ನಲಾಗಿದೆ. ಇದೇ ಕಾರಣಕ್ಕೆ ಜಾಧವ ಸಹಚರರು ಏಕೆ ಹಾಗೆ ನೋಡುತ್ತಿಯಾ? ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಘರ್ಷಣೆ ಶುರುವಾಗಿದೆ.

ಈ ಘಟನೆಯಲ್ಲಿ ಎರಡೂ ಗುಂಪಿನವರು ಪರಸ್ಪರ ಖಡ್ಗ ಮಾದರಿಯ ಮಾರಕಾಸ್ತ್ರ, ಗಾಜಿನ ಬಾಟಲ್ ಹಾಗೂ ಕಬ್ಬಿಣದ ರಾಡ್‌ಗಳಿಂದ ಹೊಡೆದಾಡಿಕೊಂಡಿದ್ದಾರೆ. ಪರಿಣಾಮ ಹಲವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಕೆಎಂಸಿಆರ್‌ಐಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘರ್ಷಣೆ ನಡೆಯುತ್ತಿರುವ ವಿಷಯ ಅರಿತ ಶಹರ ಹಾಗೂ ಬೆಂಡಿಗೇರಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮುಂದಾಗುವ ಅನಾಹುತವನ್ನು ತಡೆದಿದ್ದಾರೆ. ಆದರೂ ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ಗುಂಪು ಅಡ್ಡಿಪಡಿಸಿದೆ.

ಗಾಯಾಳುಗಳನ್ನು ಪ್ರತ್ಯೇಕ ಎರಡು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಗುಂಪು ಕಡೆಯಿಂದ ದೂರು ಸ್ವೀಕರಿಸಿದ್ದು, 4-5 ಜನರನ್ನು ಶಹರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net