ವಿಜ್ಞಾನ ಪ್ರಶ್ನೆ ಪತ್ರಿಕೆ ರಚನೆ ಇರಲಿ ಸರಳ

25- sceince story
Published on

ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ ಕಳೆದ ಅರ್ಧ ವಾರ್ಷಿಕ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಷಯದ ಪ್ರಶ್ನೆಗಳಿಗೆ ಉತ್ತರಿಸಲು ಮಕ್ಕಳಿಗೆ ಕಷ್ಟವಾಗಿದೆ. ಹೀಗಾಗಿ, ಮುಂಬರುವ ಎಸ್​ಎಸ್​ಎಲ್​ಸಿ ಪರೀಕ್ಷೆಯ ವಿಜ್ಞಾನ ಪ್ರಶ್ನೆ ಪತ್ರಿಕೆಯನ್ನು ಸರಳಗೊಳಿಸಬೇಕು ಎಂಬ ಮಾತು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರಿಂದ ಕೇಳಿ ಬಂದಿದೆ. ಮಕ್ಕಳ ಮನೋವೈಜ್ಞಾನಿಕ, ಸಾಮಾಜಿಕ, ಕೌಟುಂಬಿಕ, ಶೈಕ್ಷಣಿಕ ಸ್ಥಿತಿಗತಿ ಮತ್ತು ಶಾಲೆಗಳಲ್ಲಿ ಪ್ರಯೋಗಗಳಿಗೆ ಲಭ್ಯವಿರುವ ಸಂಪನ್ಮೂಲ ಗಮನದಲ್ಲಿಟ್ಟುಕೊಂಡು ವಿಜ್ಞಾನ ಪ್ರಶ್ನೆ ಪತ್ರಿಕೆ ತಯಾರಿಸಬೇಕು. ದ್ವಿತೀಯ ಪಿಯುಸಿ ವಿಜ್ಞಾನ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಎಸ್​ಎಸ್​ಎಲ್​ಸಿ ಪ್ರಶ್ನೆ ಪತ್ರಿಕೆ ರಚಿಸಬೇಕು ಎಂಬುದು ಅಖಿಲ ಕರ್ನಾಟಕ ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ವೇದಿಕೆ ಸೇರಿ ಮತ್ತಿತರ ಸಂಘಟನೆಗಳ ಒತ್ತಾಯವಾಗಿದೆ. ಈ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ (ಕೆಎಸ್​ಇಎಬಿ) ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು ವಿಧಾನ ಪರಿಷತ್ ಸದಸ್ಯರ ಸಮ್ಮುಖದಲ್ಲಿ ಇತ್ತೀಚೆಗೆ ಕೆಎಸ್​ಇಎಬಿ ಅಧ್ಯಕ್ಷರು ಮತ್ತು ನಿರ್ದೇಶಕರಿಗೆ ಮನವಿ ಸಲ್ಲಿಸಿವೆ. ಶಿಕ್ಷಕರ ಬೇಡಿಕೆಗಳು ಶೇ. 50ರಷ್ಟು ಪ್ರಶ್ನೆಗಳು ನೇರವಾಗಿರಲಿ. ತಿರುಚಿ ಪ್ರಶ್ನೆ ಕೇಳುವುದು ಬೇಡ. ಕೌಶಲ ವ್ಯಾಪ್ತಿಯಲ್ಲಿ ಚಿತ್ರ ಬಿಡಿಸುವ ಪ್ರಶ್ನೆಗಳಿಗೆ 12 ಅಂಕ ಇರಲಿ, ಉನ್ನತ ಮಟ್ಟದ ಕೌಶಲ ಗುರುತಿಸಲು 4 ಅಂಕ ಇರಲಿ. ಬಹು ಆಯ್ಕೆ ಪ್ರಶ್ನೆಗಳು 20 ಇರಲಿ. 4 ಅಂಕಗಳ ಹೊಂದಿಸಿ ಬರೆಯುವ ಪ್ರಶ್ನೆ ಇರಲಿ. ಒಂದೇ ವಾಕ್ಯದಲ್ಲಿ ಉತ್ತರಿಸುವ 6 ಪ್ರಶ್ನೆ ಇರಲಿ. 2 ಅಂಕದ 10 ಪ್ರಶ್ನೆ ಇರಲಿ. 3 ಅಂಕದ 5 ಪ್ರಶ್ನೆ ಇರಲಿ. 4 ಅಂಕದ 4 ಪ್ರಶ್ನೆ ಇರಲಿ. 5 ಅಂಕದ ಪ್ರಶ್ನೆಗಳು ಬೇಡ. ಪರೀಕ್ಷೆಗಳಲ್ಲಿ ವೆಬ್ ಕ್ಯಾಮ್ ವ್ಯವಸ್ಥೆಯನ್ನು 6ರಿಂದ 8ನೇ ತರಗತಿಯಿಂದಲೇ ಆರಂಭಿಸಿ. ಮಂಡಳಿಯಿಂದಲೇ ಸೂಕ್ತ ಸಂಪನ್ಮೂಲ, ಪ್ರಶ್ನೆ ಭಂಡಾರವನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸಬೇಕು. ಇದರಿಂದ ಮಕ್ಕಳು, ಪಾಲಕರು ಮತ್ತು ಶಿಕ್ಷಕರಿಗೆ ಅನುಕೂಲವಾಗಲಿದೆ. ಬೋಧಕೇತರ ಕೆಲಸ ಹೊರೆ ಕಡಿಮೆ ಮಾಡಿ ಶಿಕ್ಷಕರು ಪ್ರತಿದಿನ ಪಾಠ ಬೋಧನೆ ಮಾಡುವುದಕ್ಕಿಂತ ಆನ್​ಲೈನ್ ಮಾಹಿತಿ ತುಂಬುವ, ಮಾಹಿತಿ ಅಪ್ಡೇಟ್ ಮಾಡುವ, ಮಕ್ಕಳ ಆಧಾರ ಕಾರ್ಡ್ ವೆರಿಫೀಕೇಶನ್ ಮುಂತಾದ ಕೆಲಸಗಳಲ್ಲಿಯೇ ಹೆಚ್ಚಿನ ಸಮಯ ವ್ಯರ್ಥವಾಗುತ್ತಿದೆ. ಇದನ್ನು ಕಡಿಮೆ ಮಾಡಬೇಕು. ಬಿಸಿಯೂಟದ ಮಾಹಿತಿ, ಮೊಟ್ಟೆ, ಚಿಕ್ಕಿ, ಬಾಳೆ ಹಣ್ಣು ವಿತರಿಸಿದ ಮಾಹಿತಿ ತುಂಬುವುದು. ವಿದ್ಯಾರ್ಥಿ ವೇತನದ ನೋಂದಣಿ. ಕೆಲ ಪ್ರೌಢ ಶಾಲೆಗಳಲ್ಲಿ ಗುಮಾಸ್ತರ ಹುದ್ದೆ ಮಂಜೂರಾತಿ ಇಲ್ಲ. ಹಳೇ ವಿದ್ಯಾರ್ಥಿಗಳು, ಪಾಲಕರು ಶಾಲಾ ದಾಖಲಾತಿ ಕೇಳಲು ಬಂದಾಗ ಶಿಕ್ಷಕರು ಬೋಧನಾ ಕೆಲಸ ಬಿಟ್ಟು ಅವರಿಗೆ ದಾಖಲೆ ನೀಡುವ ಕೆಲಸ ಮಾಡಬೇಕು. ಪ್ರೌಢ ಶಾಲೆಗಳಲ್ಲಿ ಹಲವಾರು ವರ್ಷಗಳಿಂದ ವಿಷಯ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಹೀಗಾಗಿ, ಕೆಲವೆಡೆ ತಮ್ಮದಲ್ಲದ ವಿಷಯವನ್ನು ಶಿಕ್ಷಕರು ಬೋಧಿಸಬೇಕಾದ ಅನಿವಾರ್ಯತೆ ಇದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿಗೆ ಕೂಡಲೇ ಅನುಮತಿ ನೀಡಬೇಕು.

ಸದ್ಯದ ಪ್ರಶ್ನೆ ಪತ್ರಿಕೆಯಲ್ಲಿ ಅನ್ವಯ (ಅಪ್ಲಿಕೇಷನ್ ಓರಿಯೆಂಟೆಡ್) ಪ್ರಶ್ನೆಗಳು ಹೆಚ್ಚಿಗೆ ಇವೆ. ಗ್ರಾಮಾಂತರ ಭಾಗದ ಮಕ್ಕಳಿಗೆ ಇವುಗಳಿಗೆ ಉತ್ತರಿಸಲು ಕಷ್ಟವಾಗುತ್ತಿದೆ. ಈ ಪ್ರಶ್ನೆಗಳನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ಅವರಿಗೆ ಕಡಿಮೆ ಇರುತ್ತದೆ. ಹೀಗಾಗಿ, ಹೆಚ್ಚು ಮಕ್ಕಳು ಅನುತ್ತೀರ್ಣರಾಗುತ್ತಿದ್ದಾರೆ. ಒಟ್ಟಾರೆ ಅನ್ವಯ ಪ್ರಶ್ನೆಗಳು ಶೇ. 20ರಷ್ಟಿರಲಿ. ಸರಾಸರಿ ಪ್ರಶ್ನೆ (ಆವರೇಜ್) ಶೇ. 45ರಷ್ಟಿರಲಿ. ಬಿಲೋವ್ ಆವರೇಜ್ ಪ್ರಶ್ನೆ ಶೇ. 35ರಷ್ಟು ಮಾಡಬೇಕು. ಇದರಿಂದ ಉತ್ತೀರ್ಣರಾಗುವವರ ಸಂಖ್ಯೆ ಹೆಚ್ಚಾಗುತ್ತದೆ. | ಎಸ್.ವಿ. ಸಂಕನೂರ ವಿಧಾನ ಪರಿಷತ್ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net