ಡಿಎನ್​ಎ ತಿಳಿದುಕೊಳ್ಳುವ ಕೇಸೇ ಹೆಚ್ಚು

13-rfsl story
Published on

ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯ (ಆರ್​ಎಫ್​ಎಸ್​ಎಲ್) ಆರಂಭವಾಗಿದ್ದು ಅನುಕೂಲವಾಗಿದೆ. 2024ರ ಜನವರಿಯಿಂದ ಈವರೆಗೆ ಒಂದೂವರೆ ವರ್ಷದಲ್ಲಿ 3,655 ಪ್ರಕರಣಗಳು ವಿಶ್ಲೇಷಣೆಗೆ ದಾಖಲಾಗಿವೆ. ಈ ಪೈಕಿ 3,622 ಪ್ರಕರಣಗಳನ್ನು ವಿಶ್ಲೇಷಣೆ ಮಾಡಿ ತನಿಖಾಧಿಕಾರಿಗಳಿಗೆ ವರದಿ ನೀಡಿದ್ದಾರೆ. ತಕ್ಷಣಕ್ಕೆ ವರದಿ ಸಿಗುತ್ತಿರುವುದರಿಂದ ಪ್ರಕರಣ ವಿಲೇಗೆ ಅನುಕೂಲವಾಗಿದೆ. ಪ್ರಯೋಗಾಲಯಕ್ಕೆ ಬಂದ ಪೈಕಿ ಡಿಎನ್​ಎ ಕುರಿತ ಪ್ರಕರಣಗಳು ಹೆಚ್ಚು ದಾಖಲಾಗಿದ್ದು, ಮಹಿಳೆ ಮತ್ತು ಮಕ್ಕಳು, ಪೋಕ್ಸೋಗೆ ಸಂಬಂಧಿಸಿದಂತೆ ಡಿಎನ್​ಎ ವಿಭಾಗಕ್ಕೆ 2,120 ಪ್ರಕರಣ, ಆಡಿಯೋ-ವಿಡಿಯೋ ಫೊರೆನ್ಸಿಕ್​ಗೆ 616, ಕಂಪ್ಯೂಟರ್ ಫೊರೆನ್ಸಿಕ್ 39, ಮೊಬೈಲ್ 555, ಭೌತಶಾಸ್ತ್ರ ವಿಭಾಗಕ್ಕೆ 155, ನಾಕೋಟಿಕ್ಸ್ ವಿಭಾಗದಲ್ಲಿ 170 ಕೇಸ್​ಗಳು ದಾಖಲಾಗಿದ್ದು, ಅಂದಾಜು 10 ಸಾವಿರ ವಿವಿಧ ಬಗೆಯ ಮಾದರಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಹುಬ್ಬಳ್ಳಿಯಲ್ಲಿ ಆರ್​ಎಫ್​ಎಸ್​ಎಲ್ ಸ್ಥಾಪಿಸಿದ್ದರಿಂದ ಈ ಭಾಗದ ವಿಶ್ಲೇಷಣೆ ವರದಿಗೆಂದು ತನಿಖಾಧಿಕಾರಿಗಳು ಬೆಂಗಳೂರಿಗೆ ಹೋಗುವುದು ತಪ್ಪಿದೆ. ಇದರಿಂದ ತನಿಖಾಧಿಕಾರಿಗಳ ಸಮಯ, ಇಲಾಖೆಯ ಹಣ ಉಳಿತಾಯವಾಗಿದೆ. ಬೇಗ ವರದಿ ದೊರೆಯುವುದರಿಂದ ಸಂಬಂಧಿಸಿದವರಿಗೆ ತ್ವರಿತವಾಗಿ ನ್ಯಾಯ ದೊರಕಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಹುಬ್ಬಳ್ಳಿ ಆರ್​ಎಫ್​ಎಸ್​ಎಲ್ ಅಧಿಕಾರಿಗಳು. 17 ಜಿಲ್ಲೆಗಳ ವ್ಯಾಪ್ತಿ: ಹುಬ್ಬಳ್ಳಿ ಆರ್​ಎಫ್​ಎಸ್​ಎಲ್ 17 ಜಿಲ್ಲಾ ಕೇಂದ್ರ, ಮೂರು ಕಮಿಷನರೇಟ್ ವ್ಯಾಪ್ತಿ ಹೊಂದಿದೆ. ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬಳ್ಳಾರಿ, ದಾವಣಗೆರೆ, ಕೊಪ್ಪಳ, ಚಿತ್ರದುರ್ಗ, ಶಿವಮೊಗ್ಗ, ರಾಯಚೂರು, ಯಾದಗಿರಿ, ಬೀದರ್, ಕಲಬುರಗಿ, ವಿಜಯನಗರ ಹಾಗೂ ಹುಬ್ಬಳ್ಳಿ- ಧಾರವಾಡ, ಕಲಬುರಗಿ, ಬೆಳಗಾವಿ ಕಮಿಷನರೇಟ್ ವ್ಯಾಪ್ತಿ ಒಳಗೊಂಡಿದೆ. ಆರು ವಿಭಾಗ ಕಾರ್ಯ ನಿರ್ವಹಣೆ: ಆರ್​ಎಫ್​ಎಸ್​ಎಲ್​ನಲ್ಲಿ ಡಿಎನ್​ಎ ವಿಭಾಗ, ಭೌತಶಾಸ್ತ್ರ, ಮೊಬೈಲ್ ಫೋನ್ ಫೊರೆನ್ಸಿಕ್, ಕಂಪ್ಯೂಟರ್ ಫೊರೆನ್ಸಿಕ್, ಆಡಿಯೋ ಮತ್ತು ವಿಡಿಯೋ ಫೊರೆನ್ಸಿಕ್, ನಾಕೋಟಿಕ್ಸ್ ಸೇರಿದಂತೆ ಆರು ವಿಭಾಗಗಳಿವೆೆ. ಡಿಎನ್​ಎ ವಿಶ್ಲೇಷಣೆಯು ಲೈಂಗಿಕ ಅಪರಾಧಗಳು, ಮಾನವ ಗುರುತಿಸುವಿಕೆ, ಪಿತೃತ್ವ-ಹೆರಿಗೆ ವಿವಾದಗಳು ಮತ್ತು ಮಕ್ಕಳ ವಿನಿಮಯಕ್ಕೆ ಸಂಬಂಧಿಸಿರುತ್ತವೆ. ಡಿಜಿಟಲ್ ಫೊರೆನ್ಸಿಕ್ ಲೈಂಗಿಕ ಅಪರಾಧಗಳು, ಚಿತ್ರಗಳ ಮಾರ್ಫಿಂಗ್, ಆಡಿಯೋ, ವಿಡಿಯೋ ದೃಢೀಕರಣ ಮತ್ತು ಐಟಿ ಕಾಯ್ದೆಗೆ ಸಂಬಂಧಿಸಿರುತ್ತವೆ. ಭೌತಶಾಸ್ತ್ರ ವಿಭಾಗದಲ್ಲಿ ರಸ್ತೆ ಅಪಘಾತಗಳು, ಹಿಟ್ ಆಂಡ್ ರನ್ ಪ್ರಕರಣ, ವಾಹನಗಳಲ್ಲಿ ಟ್ಯಾಂಪರಿಂಗ್, ಗುರುತು ಮತ್ತು ಹೋಲಿಕೆ, ದೃಢೀಕರಣದ ಪ್ರಕರಣ, ಕಾಪಿ ರೈಟ್​ಗೆ ಸಂಬಂಧಿಸಿದಂತೆ ವಿವಿಧ ವಸ್ತುಗಳ ನೈಜತೆ ಮತ್ತು ಭೌತಿಕ ಹೊಂದಾಣಿಕೆ ವಿಶ್ಲೇಷಣೆ ಮಾಡಲಾಗುತ್ತದೆ. ಎನ್​ಎಬಿಎಲ್ ಮಾನ್ಯತೆ: ಹುಬ್ಬಳ್ಳಿ ಆರ್​ಎಫ್​ಎಸ್​ಎಲ್​ಗೆ 2024ರ ಮೇನಲ್ಲಿ ಎನ್​ಎಬಿಎಲ್ (ನ್ಯಾಷನಲ್ ಅಕ್ರೆಡಿಟೇಷನ್ ಬೋರ್ಡ್ ಫಾರ್ ಟೆಸ್ಟಿಂಗ್ ಆಂಡ್ ಕ್ಯಾಲಿಬರೇಷನ್ ಲ್ಯಾಬೋರೆಟರೀಸ್) ಮಾನ್ಯತೆ ದೊರೆತಿದೆ. ಈ ವರ್ಷ ಬಿಎಸ್​ಸಿ, ಎಂಎಸ್​ಸಿ ಪದವಿ ಪಡೆದ 19 ವಿದ್ಯಾರ್ಥಿಗಳಿಗೆ 1 ತಿಂಗಳ ಇಂಟರ್ನ್​ಶಿಪ್ ತರಬೇತಿ ನೀಡಲಾಗಿದೆ. 57 ಕಡೆ ತೆರಳಿದ ಮೊಬೈಲ್ ಫೊರೆನ್ಸಿಕ್ : ಇಲ್ಲಿ ಸಂಚಾರ ವಿಧಿ ವಿಜ್ಞಾನ ಪ್ರಯೋಗಾಲಯ (ಮೊಬೈಲ್ ಫೊರೆನ್ಸಿಕ್ ಸೈನ್ಸ್ ಲ್ಯಾಬ್) ವಾಹನವಿದೆ. ತನಿಖಾಧಿಕಾರಿಗಳ ಕೋರಿಕೆ ಮೇರೆಗೆ ಒಂದೂವರೆ ವರ್ಷದಲ್ಲಿ 57 ಘಟನಾ ಸ್ಥಳಕ್ಕೆ ತೆರಳಿ ಅಲ್ಲಿ ದೊರೆತ ಭೌತಿಕ ಕುರುಹುಗಳನ್ನು ಸಂಗ್ರಹಿಸಿ, ವಿಶ್ಲೇಷಣೆಗೆ ಒಳಪಡಿಸಿ, ತನಿಖಾಧಿಕಾರಿಗಳಿಗೆ ವರದಿ ನೀಡಲಾಗಿದೆ.

ಹುಬ್ಬಳ್ಳಿಯಲ್ಲಿ 2022ರ ಫೆಬ್ರವರಿಯಲ್ಲಿ ಆರ್​ಎಫ್​ಎಸ್​ಎಲ್ ಶುರುವಾಗಿದೆ. ಆರು ವಿಭಾಗಗಳಿಗೂ ಪ್ರಕರಣಗಳು ವಿಶ್ಲೇಷಣೆಗೆ ದಾಖಲಾಗಿರುತ್ತವೆ. ಡಿಎನ್​ಎ ವಿಭಾಗಕ್ಕೆ ಹೆಚ್ಚು ಕೇಸ್​ಗಳು ಬಂದಿವೆ. ನಿಗದಿತ ಅವಧಿಯೊಳಗೆ ಪ್ರಕರಣಗಳನ್ನು ವಿಲೇವಾರಿ ಮಾಡಿ ವರದಿ ನೀಡಲಾಗುವುದು. | ಡಾ. ಚಂದ್ರಶೇಖರ, ಉಪನಿರ್ದೇಶಕ, ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಹುಬ್ಬಳ್ಳಿ ಕೆಲ ಕ್ಲಿಷ್ಟಕರ ಪ್ರಕರಣಗಳಲ್ಲಿ ಆರ್​ಎಫ್​ಎಸ್​ಎಲ್ ನೀಡುವ ವರದಿ ಮಹತ್ವದ ಪಾತ್ರ ವಹಿಸುತ್ತದೆ. ಅಗತ್ಯವಿದ್ದರೆ ಮೊಬೈಲ್ ಫೊರೆನ್ಸಿಕ್ ಸೈನ್ಸ್ ಲ್ಯಾಬ್ ಸಂಚಾರ ವಾಹನವನ್ನು ಘಟನಾ ಸ್ಥಳಕ್ಕೆ ಕೊಂಡೊಯ್ಯಲಾಗುತ್ತದೆ. ಅವರು ಪರಿಶೀಲಿಸಿ ವರದಿ ನೀಡಿದ ಬಳಿಕ ತನಿಖಾಧಿಕಾರಿಗಳು ಅಂತಿಮ ವರದಿ ಸಲ್ಲಿಸುತ್ತಾರೆ. ಹುಬ್ಬಳ್ಳಿಯಲ್ಲಿ ಆರ್​ಎಫ್​ಎಸ್​ಎಲ್ ಸ್ಥಾಪನೆ ಬಳಿಕ ವಿಶ್ಲೇಷಣಾ ವರದಿಗಳು ಬೇಗ ಸಿಗುತ್ತಿವೆ.  ಡಾ. ಗೋಪಾಲ ಬ್ಯಾಕೋಡ ಧಾರವಾಡ ಎಸ್​ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net